ಕೊಲಂಬೊ: ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬೃಹತ್ ಅಂತರದಿಂದ ಗೆದ್ದ ಹುರುಪಿನಲ್ಲಿದ್ದ ಟೀಂ ಇಂಡಿಯಾ ಇಂದು ಶ್ರೀಲಂಕಾ ವಿರುದ್ದ ಮುಗ್ಗರಿಸಿದೆ. ಲಂಕನ್ ಸ್ಪಿನ್ನರ್ ಗಳ ಕೈಚಳಕಕ್ಕೆ ಟೀಂ ಇಂಡಿಯಾ ಬ್ಯಾಟರ್ ಗಳು ಪತರುಗುಟ್ಟಿದ್ದಾರೆ.
ಸದ್ಯ ಮಳೆಯ ಕಾರಣದಿಂದ ಪಂದ್ಯ ಸ್ಥಗಿತವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡವು 47 ಓವರ್ ಗಳಲ್ಲಿ ಕೇವಲ 197 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿದೆ. ಲಂಕಾದ 20 ವರ್ಷದ ಸ್ಪಿನ್ನರ್ ದುನಿತ್ ವೆಲ್ಲಲಗೆ ಮತ್ತು ಚರಿತ್ ಅಸಲಂಕಾ ಮಿಂಚಿದರು.
ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ನಾಯಕ ರೋಹಿತ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಗೆ 80 ರನ್ ಕಲೆ ಹಾಕಿದರು. ರೋಹಿತ್ 53 ರನ್ ಮಾಡಿದರೆ, ಗಿಲ್ 19 ರನ್ ಗಳಿಸಿ ಔಟಾದರು. ಆದರೆ ಕಳೆದ ಪಂದ್ಯದ ಶತಕವೀರ ವಿರಾಟ್ ಕೇವಲ ಮೂರು ರನ್ ಗೆ ಔಟಾದರು.
ಮಧ್ಯದಲ್ಲಿ ಕೆಎಲ್ ರಾಹುಲ್ (39 ರನ್) ಮತ್ತು ಇಶಾನ್ ಕಿಶನ್ (33 ರನ್) ತಂಡವನ್ನು ತಕ್ಕಮಟ್ಟಿಗೆ ಆಧರಿಸಿದರು. ಅದ್ಭುತ ಬೌಲಿಂಗ್ ದಾಳಿ ನಡೆಸಿದ ವೆಲ್ಲಲಗೆ ಮೊದಲ ನಾಲ್ಕು ವಿಕೆಟ್ ಪಡೆದು ಭಾರತೀಯ ಬ್ಯಾಟರ್ ಗಳಿಗೆ ಕಡಿವಾಣ ಹಾಕಿದರು. ಒಟ್ಟು 40 ರನ್ ನೀಡಿದ ಅವರು ಐದು ವಿಕೆಟ್ ಕಿತ್ತರು.
ಹೆಚ್ಚುವರಿ ಬೌನ್ಸ್ ದೊರೆಯುವ ಪಿಚ್ ನಲ್ಲಿ ಶ್ರೀಲಂಕಾ ನಾಲ್ವರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದಿದೆ. ವೆಲ್ಲಲಗೆಗೆ ಉತ್ತಮ ಸಾಥ್ ನೀಡಿದ ಪಾರ್ಟ್ ಟೈಮ್ ಸ್ಪಿನ್ನರ್ ಚರಿತ್ ಅಸಲಂಕಾ 4 ವಿಕೆಟ್ ಪಡೆದಿದ್ದಾರೆ.
ಸದ್ಯ 15 ರನ್ ಗಳಿಸಿರುವ ಅಕ್ಷರ್ ಪಟೇಲ್ ಮತ್ತು ಎರಡು ರನ್ ಮಾಡಿರುವ ಸಿರಾಜ್ ಕ್ರೀಸ್ ನಲ್ಲಿದ್ದಾರೆ.
ಭಾರತವು ಇಂದು ಮೂವರು ಸ್ಪಿನ್ನರ್ ಗಳೊಂದಿಗೆ ಆಡುತ್ತಿದೆ. ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿದ್ದಾರೆ.