Advertisement

Asia Cup; ಜಿದ್ದಾಜಿದ್ದಿನ ಪಂದ್ಯ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಲಂಕಾ: ಪಾಕ್ ಗೆ ಶಾಕ್

01:27 AM Sep 15, 2023 | Team Udayavani |

ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ಗುರುವಾರದ ಸೆಮಿ ಫೈನಲ್‌ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡ ತವರಿನಲ್ಲಿ ವಿಕ್ರಮ ಮೆರೆದಿದ್ದು ಪಾಕಿಸ್ಥಾನಕ್ಕೆ ಸೋಲಿನ ಶಾಕ್ ನೀಡಿ ಫೈನಲ್ ಗೆ ಲಗ್ಗೆ ಇಟ್ಟಿದೆ. ರವಿವಾರ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ- ಭಾರತವನ್ನು ಎದುರಿಸಲಿದೆ.

Advertisement

ಮಹತ್ವ ಪಡೆದ ಪಂದ್ಯಕ್ಕೂ ಮಳೆ ತೊಂದರೆ ನೀಡಿತು. ಮಳೆಯ ನಡುವೆಯೂ ಪಂದ್ಯ ಸಾಗಿದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ತಂಡವು (ಡಿಎಲ್ ಎಸ್) ನಿಗದಿತ 42 ಓವರ್‌ಗಳಲ್ಲಿ 7 ವಿಕೆಟಿಗೆ ರನ್‌ 252 ಗಳಿಸಿತು. 252 ರನ್ ಗಳ ಗುರಿ ಬೆನ್ನತ್ತಿದ್ದ ಲಂಕಾ ಹಠ ತೊಟ್ಟು ಹೋರಾಟಕ್ಕಿಳಿದು ಪಾಕ್ ಬೌಲಿಂಗ್ ದಾಳಿ ಎದುರಿಸಿ 42 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು.

ಕೊನೆಯ 12 ಎಸೆತಗಳಲ್ಲಿ 12 ರನ್ ಗಳ ಅಗತ್ಯವಿತ್ತು. ಆ ವೇಳೆ ಎರಡು ವಿಕೆಟ್ ಗಳನ್ನು ಕೀಳುವಲ್ಲಿ ಅಫ್ರಿದಿ ಯಶಸ್ವಿ ಯಾದರು. ಕೊನೆಯ ಓವರ್ ನಲ್ಲಿ 6 ಎಸೆತಗಳಲ್ಲಿ 8 ರನ್ ಗಳ ಅಗತ್ಯವಿತ್ತು. ಜಮಾನ್ ಖಾನ್ ಎಸೆದ ಕೊನೆಯ ಎರಡು ಎಸೆತಗಳಲ್ಲಿ ಆರು ರನ್ ಗಳ ಅಗತ್ಯವಿತ್ತು. ಒಂದು ಬೌಂಡರಿಯನ್ನು ಚರಿತ್ ಅಸಲಂಕಾ ಬಾರಿಸುವಲ್ಲಿ ಯಶಸ್ವಿಯಾದರು. ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಿ 252/8 (42) ಫೈನಲ್ ಗೆ ಲಗ್ಗೆ ಇಟ್ಟರು. ಚರಿತ್ ಅಸಲಂಕಾ ಔಟಾಗದೆ 49 ರನ್ ಗಳಿಸಿದ್ದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

20 ರನ್ ಗಳಿಸಿದ್ದ ವೇಳೆ ಕುಸಾಲ್ ಪೆರೆರಾ ಅವರ ವಿಕೆಟ್ ಕಳೆದುಕೊಂಡಿತು. ಕುಸಾಲ್ 8 ಎಸೆತಗಳಲ್ಲಿ 17 ರನ್ ಗಳಿಸಿದ್ದರು. ಪಾತುಮ್ ನಿಸ್ಸಾಂಕ 29 ರನ್ ಗಳಿಸಿ ಔಟಾದರು. ತಂಡಕ್ಕೆ ಆಧಾರವಾದ ಅತ್ಯಮೋಘ ಆಟವಾಡಿದ ಕುಸಾಲ್ ಮೆಂಡಿಸ್ 91 ರನ್ ಗಳಿಸಿದ್ದ ವೇಳೆ ಇಫ್ತಿಕರ್ ಅಹ್ಮದ್ ಎಸೆದ ಚೆಂಡನ್ನು ಮೊಹಮ್ಮದ್ ಹ್ಯಾರಿಸ್ ಕೈಗಿತ್ತು ನಿರ್ಗಮಿಸಿದರು. ಶತಕದ ಅಂಚಿನಲ್ಲಿ ಔಟಾಗಿ ಶತಕ ವಂಚಿತರಾಗಿ ಭಾರಿ ನಿರಾಸೆ ಅನುಭವಿಸಿದರು. 87 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಮೆಂಡಿಸ್ ಅವರಿಗೆ ಸಾಥ್ ನೀಡಿದ ಸದೀರ ಸಮರವಿಕ್ರಮ 48 ರನ್ ಗಳಿಸಿ ಔಟಾದರು. ಅರ್ಧ ಶತಕದ ಅಂಚಿನಲ್ಲಿ ಎಡವಿದರು. 51 ಎಸೆತಗಳಲ್ಲಿ 4 ಬೌಂಡರಿ ಬಾರಿಸಿದ್ದರು.ನಾಯಕ ದಸುನ್ ಶಣಕ 2 ರನ್ ಗಳಿಸಿದ್ದ ವೇಳೆ ಔಟಾದರು.

ಶಫೀಕ್‌, ರಿಜ್ವಾನ್‌ ಆಸರೆ

Advertisement

ಆರಂಭಿಕ ಆಟಗಾರ ಅಬ್ದುಲ್ಲ ಶಫೀಕ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಅವರ ಅರ್ಧಶತಕದಿಂದಾಗಿ ಪಾಕಿಸ್ಥಾನ ತಂಡವು ಆತಿಥೇಯ ಶ್ರೀಲಂಕಾಕ್ಕೆ ಕಠಿನ ಸವಾಲು ನೀಡಿತ್ತು.

ಭಾರೀ ಮಳೆಯಿಂದ ಪಿಚ್‌ ಒದ್ದೆ ಯಾಗಿದ್ದರಿಂದ ಬ್ಯಾಟಿಂಗ್‌ ಮಾಡಲು ಬಹಳ ಕಷ್ಟವಾಗಿತ್ತು. ಎಚ್ಚರಿಕೆಯಿಂದ ಇನ್ನಿಂಗ್ಸ್‌ ಆರಂಭಿಸಿದ ಅಬ್ದುಲ್ಲ ಶಫೀಕ್‌ ಮತ್ತು ಫ‌ಖಾರ್‌ ಜಮಾನ್‌ ಹೆಚ್ಚು ಹೊತ್ತು ನಿಲ್ಲಲು ವಿಫ‌ಲರಾದರು. 4 ರನ್‌ ಗಳಿಸಿದ ಜಮಾನ್‌ ಅವರು ಪ್ರಮೋದ್‌ ಮದುಶನ್‌ಗೆ ವಿಕೆಟ್‌ ಒಪ್ಪಿಸಿದರು. ಆಬಳಿಕ ಶಫೀಕ್‌ ಅವರನ್ನು ಸೇರಿಕೊಂಡ ನಾಯಕ ಬಾಬರ್‌ ಆಜಂ ತಂಡವನ್ನು ಆಧರಿಸಿದರು. ದ್ವಿತೀಯ ವಿಕೆಟಿಗೆ 64 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಸುಸ್ಥಿತಿಗೆ ತರಲು ಪ್ರಯತ್ನಿಸಿದರು.

ನಾಯಕ ಆಜಂ 29 ರನ್‌ ಗಳಿಸಿ ವೆಲ್ಲಲಗೆ ಅವರಿಗೆ ವಿಕೆಟ್‌ ಒಪ್ಪಿಸಿದರು. ಆರಂಭಿಕ ಶಫೀಕ್‌ 52 ರನ್ನಿಗೆ ಔಟಾದರೆ ಮೊಹಮ್ಮದ್‌ ಹ್ಯಾರಿಸ್‌ ಮತ್ತು ನವಾಜ್‌ ಹೆಚ್ಚು ಹೊತ್ತು ನಿಲ್ಲಲು ವಿಫ‌ಲ ರಾದರು. 69 ಎಸೆತ ಎದುರಿಸಿದ ಶಫೀಕ್‌ 3 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು.

ಶತಕದ ಜತೆಯಾಟ
ಕೊನೆ ಹಂತದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಮೊಹಮ್ಮದ್‌ ರಿಜ್ವಾನ್‌ ಮತ್ತು ಇಫ್ತಿಕಾರ್‌ ಅಹ್ಮದ್‌ ಅವರು ಆರನೇ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಭಾಗಿಯಾಗಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಶ್ರೀಲಂಕಾ ದಾಳಿಯನ್ನು ದಿಟ್ಟ ವಾಗಿ ಎದುರಿಸಿದ ಅವರಿಬ್ಬರು ಎಸೆತಕ್ಕಿಂತ ವೇಗವಾಗಿ ರನ್‌ ಪೇರಿಸತೊಡಗಿದರು. 41ನೇ ಓವರಿನಲ್ಲಿ ಅಹ್ಮದ್‌ 47 ರನ್‌ ಗಳಿಸಿ ಔಟಾದರು. 40 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. ರಿಜ್ವಾನ್‌ ಕೊನೆಗೂ 86 ರನ್‌ ಗಳಿಸಿ ಅಜೇಯರಾಗಿ ಉಳಿದರು. 73 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

ಎರಡೂ ತಂಡಗಳಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿತ್ತು. ಬೆನ್ನು ನೋವಿನಿಂದ ಇಮಾಮ್‌ ಉಲ್‌ ಹಕ್‌ ಮತ್ತು ಜ್ವರದಿಂದ ಸೌದ್‌ ಶಕೀಲ್‌ ಅವರನ್ನು ಹೊರಗಿಡಲಾಗಿತ್ತು. ಅವರಿಬ್ಬರ ಬದಲಿಗೆ ಫ‌ಖಾರ್‌ ಜಮಾನ್‌ ಮತ್ತು ಅಬ್ದುಲ್ಲ ಶಫೀಕ್‌ ತಂಡಕ್ಕೆ ಸೇರಿ ಕೊಂಡಿದ್ದರು. ಶ್ರೀಲಂಕಾ ಪರ ಕುಸಲ್‌ ಪೆರೇರ ಮತ್ತು ಪ್ರಮೋದ್‌ ಮದುಶನ್‌ ತಂಡಕ್ಕೆ ಆಯ್ಕೆಯಾಗಿದ್ದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ಥಾನ 42 ಓವರ್‌ಗಳಲ್ಲಿ 7 ವಿಕೆಟಿಗೆ 252 (ಅಬ್ದುಲ್ಲ ಶಫೀಕ್‌ 52, ಬಾಬರ್‌ ಆಜಂ 29, ಮೊಹಮ್ಮದ್‌ ರಿಜ್ವಾನ್‌ 86 ಔಟಾಗದೆ, ಇಫ್ತಿಕಾರ್‌ ಅಹ್ಮದ್‌ 47, ಮತೀಶ ಪತಿರಣ ಕ್ಕೆ 65ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next