ಮುಂಬೈ: ಬಹು ನಿರೀಕ್ಷಿತ ಏಷ್ಯಾ ಕಪ್ ಕ್ರಿಕೆಟ್ ಕೂಟದ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಸಮಿತಿ ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಿಲಿದೆ. ಈ ಬಾರಿ ಏಷ್ಯಾಕಪ್ 50 ಓವರ್ ಮಾದರಿಯಲ್ಲಿ ನಡೆಯಲಿದ್ದು, ಹೈಬ್ರಿಡ್ ಮಾಡೆಲ್ ನಲ್ಲಿ ಎರಡು ದೇಶದಲ್ಲಿ ಆಯೋಜಿಸಲಾಗುತ್ತದೆ.
ಆಗಸ್ಟ್ ಮತ್ತು ಸಪ್ಟೆಂಬರ್ ನಲ್ಲಿ ಏಷ್ಯಾ ಕ್ರಿಕೆಟ್ ಕೂಟ ನಡೆಯಲಿದೆ. ಪಾಕಿಸ್ತಾನದಲ್ಲಿ ಕೆಲವು ಪಂದ್ಯಗಳು ಮತ್ತು ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಶ್ರೀಲಂಕಾದ ಡಂಬುಲಾದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ಮತ್ತೆ ತಿರಸ್ಕೃತ
ಏಷ್ಯಾ ಕಪ್ 2023 ಪಂದ್ಯಗಳನ್ನು ನಡೆಸಲು ಕೊಲಂಬೊ ಆದ್ಯತೆಯ ಆಯ್ಕೆಯಾಗಿದ್ದರೂ, ಶ್ರೀಲಂಕಾದಲ್ಲಿ ಮಾನ್ಸೂನ್ ಋತುವಿನ ಕಾರಣದಿಂದಾಗಿ ಡಂಬುಲಾವನ್ನು ಅಂತಿಮವಾಗಿ ಶ್ರೀಲಂಕಾದ ತಾಣವಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಲೆಗ್ ನ ಪಂದ್ಯಗಳು ಲಾಹೋರ್ ನಲ್ಲಿ ನಡೆಯಲಿದೆ.
ತಾತ್ಕಾಲಿಕ ವೇಳಾಪಟ್ಟಿಯನ್ನು ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಾರದೊಳಗೆ ವೇಳಾಪಟ್ಟಿ ಬರಲಿದೆ. ಮಾನ್ಸೂನ್ ಕಾರಣದಿಂದ ಕೊಲಂಬೋದಲ್ಲಿ ಪಂದ್ಯ ನಡೆಸುವುದು ಕಷ್ಟ. ಭಾರತ- ಪಾಕಿಸ್ತಾನ ಪಂದ್ಯವನ್ನು ಕೊಲಂಬೋದಲ್ಲಿ ನಡೆಸುವುದು ನಮ್ಮ ಉದ್ದೇಶವಾಗಿತ್ತು, ಆದರೆ ಮಳೆಯ ಕಾರಣದಿಂದ ಅದು ಕಷ್ಟ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.