ಮುಂಬೈ: ಕೊನೆಗೂ ಏಷ್ಯಾ ಕಪ್ ನ ದಿನಾಂಕಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಖಚಿತಪಡಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಏಷ್ಯಾ ಸಂಸ್ಥೆಯು ಪಾಕಿಸ್ತಾನ ಮತ್ತು ಶ್ರೀಲಂಕಾ ಪಂದ್ಯಾವಳಿಯನ್ನು ಸಹ-ಆತಿಥ್ಯ ವಹಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಏಷ್ಯಾ ಕಪ್ 2023 ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತದೆ. ಪಾಕಿಸ್ತಾನವು ಕೆಲವು ಪಂದ್ಯಗಳನ್ನು ಆಯೋಜಿಸುತ್ತದೆ ಮತ್ತು ಶ್ರೀಲಂಕಾ ಇತರ ಪಂದ್ಯಗಳನ್ನು ಆಯೋಜಿಸುತ್ತದೆ. ಪಾಕಿಸ್ತಾನದ ಲೆಗ್ ನ ಪಂದ್ಯಗಳು ಲಾಹೋರ್ ನಲ್ಲಿ ನಡೆಯುವ ಸಾಧ್ಯತೆಯಿದೆ.
ಏಷ್ಯಾ ಕಪ್ ಕೂಟವು ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದ್ದು, ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ನಡುವೆ ಕೂಟ ನಡೆಯಲಿದೆ. ಟೂರ್ನಿಯಲ್ಲಿ 13 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:‘ಪಾನ್ ಮಸಾಲ’ ಕ್ರಿಕೆಟಿಗರ ವಿರುದ್ಧ ಗೌತಮ್ ಗಂಭೀರ್ ಕೆಂಡಾಮಂಡಲ
ಏಷ್ಯಾ ಕಪ್ ಗುಂಪು ಮಾದರಿಯಲ್ಲಿ ಆಡಲಾಗುತ್ತದೆ. ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಹೈಬ್ರಿಡ್ ಮಾದರಿಯಲ್ಲಿ, ಪಾಕಿಸ್ತಾನವು ನಾಲ್ಕು ಪಂದ್ಯಗಳನ್ನು ಆಯೋಜಿಸುತ್ತದೆ ಮತ್ತು ಒಂಬತ್ತು ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ-ಪಾಕಿಸ್ತಾನ ನಡುವಿನ ಹಣಾಹಣಿ ಶ್ರೀಲಂಕಾದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತವು ಗುಂಪು ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.