Advertisement

ಭಾರತ-ಪಾಕ್‌: ಇಂದು “ಸೂಪರ್‌ ಫೋರ್‌’ಸಂಡೇ; ಬದ್ಧ ಎದುರಾಳಿಗಳು ಮತ್ತೆ ಕಣಕ್ಕೆ

11:31 PM Sep 03, 2022 | Team Udayavani |

ದುಬಾೖ: ಏಷ್ಯಾ ಕಪ್‌ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ಥಾನ ನಡುವಿನ ದ್ವಿತೀಯ ಸುತ್ತಿನ ಕಾದಾಟಕ್ಕೆ ಅಖಾಡ ಸಜ್ಜಾಗಿದೆ.

Advertisement

ರವಿವಾರ ದುಬಾೖಯಲ್ಲಿ ಈ ಮುಖಾಮುಖಿ ನಡೆಯಲಿದ್ದು, ಕ್ರಿಕೆಟ್‌ ಪ್ರೇಮಿಗಳು ಚುಟುಕು ಕ್ರಿಕೆಟ್‌ನ ಭಾರೀ ರೋಮಾಂಚನವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಭಾರತ-ಪಾಕಿಸ್ಥಾನ ಕಳೆದ ರವಿವಾರವೂ ಎದುರಾಗಿದ್ದವು. ಅದು “ಎ’ ವಿಭಾಗದ ಲೀಗ್‌ ಪಂದ್ಯವಾಗಿತ್ತು. 148 ರನ್‌ ಗುರಿ ಪಡೆದ ರೋಹಿತ್‌ ಶರ್ಮ ಬಳಗ 5 ವಿಕೆಟ್‌ ಗೆಲುವು ಸಾಧಿಸಿತ್ತು. ಸೆ. 4ರಂದು ನಡೆಯುವುದು “ಸೂಪರ್‌ ಫೋರ್‌’ ಮುಖಾಮುಖಿ.ಭಾರತ ಮೊದಲ ಪಂದ್ಯವನ್ನು ಗೆದ್ದ ಉತ್ಸಾಹದಲ್ಲಿದ್ದರೆ, ಪಾಕಿಸ್ಥಾನ ಸೇಡಿಗಾಗಿ ಹಪಹಪಿಸುತ್ತಿದೆ.

ಲೀಗ್‌ನಲ್ಲಿ ಎರಡೂ ತಂಡಗಳು ಹಾಂಕಾಂಗ್‌ಗೆ ಸೋಲುಣಿಸಿದ್ದವು. ಇದರಲ್ಲಿ ಪಾಕಿಸ್ಥಾನದ ಗೆಲುವು ಅಧಿಕಾರಯುತವಾಗಿತ್ತು. ಒಂದು ದಿನದ ಹಿಂದಷ್ಟೇ ಹಾಂಕಾಂಗ್‌ ಮೇಲೆ ಸವಾರಿ ಮಾಡಿ, ಜುಜುಬಿ 38 ರನ್ನಿಗೆ ಉಡಾಯಿಸಿತ್ತು; 155 ರನ್ನುಗಳ ಭಾರೀ ಅಂತರದ ಜಯಭೇರಿ ಮೊಳಗಿಸಿತ್ತು. ಆದರೆ ಭಾರತಕ್ಕೆ ಹಾಂಕಾಂಗ್‌ನ 5 ವಿಕೆಟ್‌ ಉರುಳಿಸಲಷ್ಟೇ ಸಾಧ್ಯವಾಗಿತ್ತು. ಅಂದಹಾಗೆ ಇದು ಭಾರತ-ಪಾಕಿಸ್ಥಾನ ನಡುವಿನ ಸೂಪರ್‌ ಫೋರ್‌ ಪಂದ್ಯದ ಭವಿಷ್ಯವೂ ಅಲ್ಲ, ಮೇಲುಗೈ ಮಾನದಂಡವೂ ಅಲ್ಲ. ಭಾರತ-ಪಾಕ್‌ ಪಂದ್ಯವೆಂದರೆ ಅದು “ಡಿಫ‌ರೆಂಟ್‌ ಬಾಲ್‌ ಗೇಮ್‌’. ಇಲ್ಲಿನ ರೋಮಾಂಚನಕ್ಕೆ ಕೊನೆ ಇಲ್ಲ.

ಸಮಸ್ಯೆ ಪರಿಹಾರಗೊಂಡಿಲ್ಲ
ಭಾರತ ಆಡಿದ ಎರಡೂ ಪಂದ್ಯಗಳನ್ನು ಗೆದ್ದರೂ ಕೆಲವು ಸಮಸ್ಯೆಗಳಿಗಿನ್ನೂ ಪರಿಹಾರ ಸಿಕ್ಕಿಲ್ಲ. ಮುಖ್ಯ ವಾಗಿ ಭಾರತದ ಓಪನಿಂಗ್‌ ನಿರೀಕ್ಷಿತ ಜೋಶ್‌ ಪಡೆದುಕೊಂಡಿಲ್ಲ. ರೋಹಿತ್‌-ರಾಹುಲ್‌ ಪವರ್‌ ಪ್ಲೇ ಅವಧಿಯಲ್ಲಿ ಸಿಡಿದು ನಿಲ್ಲುವ ಅಗತ್ಯವಿದೆ. ಪಾಕ್‌ ಎದುರಿನ ಕಳೆದ ಪಂದ್ಯದಲ್ಲಿ ರಾಹುಲ್‌ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದ್ದರು. ಕಳೆದ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲೂ ರಾಹುಲ್‌ ಮೊದಲ ಎಸೆತದಲ್ಲೇ ಔಟಾಗಿದ್ದನ್ನು ಮರೆಯುವಂತಿಲ್ಲ. ಈ ಸಲವಾದರೂ ಒಂದಿಷ್ಟು ರನ್‌ ಪೇರಿಸಬೇಕಿದೆ. ಹಾಗೆಯೇ ವಿರಾಟ್‌ ಕೊಹ್ಲಿ ಮೈಚಳಿ ಬಿಟ್ಟು ಆಡುವುದು ಮುಖ್ಯ. ಟಾಪ್‌-3 ಬ್ಯಾಟರ್ ಕ್ಲಿಕ್‌ ಆದರೆ ತಂಡದ ಅರ್ಧ ಸಮಸ್ಯೆ ಪರಿಹಾರ ಕಂಡಂತೆ. ಆಗ ಸೂರ್ಯಕುಮಾರ್‌ ಯಾದವ್‌ ಇನ್ನಷ್ಟು ಬಿರುಸಿನ ಬ್ಯಾಟಿಂಗ್‌ ನಡೆಸಬಹುದಾಗಿದೆ.

Advertisement

ಆಲ್‌ರೌಂಡರ್‌ ರವೀಂದ್ರ ಜಡೇಜ ಗಾಯಾಳಾಗಿ ಕೂಟದಿಂದ ಹೊರಬಿದ್ದದ್ದು ಭಾರತಕ್ಕೆ ಖಂಡಿತವಾಗಿಯೂ ಹಿನ್ನಡೆ. ಕಳೆದ ಸಲ ಪಾಕಿಸ್ಥಾನ ವಿರುದ್ಧ ಅವರನ್ನು 4ನೇ ಕ್ರಮಾಂಕಕ್ಕೆ ಭಡ್ತಿ ನೀಡಲಾಗಿತ್ತು. ರಿಷಭ್‌ ಪಂತ್‌ ಅವರನ್ನು ಕೈಬಿಟ್ಟ ಕಾರಣ ಲೆಫ್ಟ್-ರೈಟ್‌ ಕಾಂಬಿನೇಶನ್‌ ರೂಪಿಸುವುದು ಇದರ ಉದ್ದೇಶವಾಗಿತ್ತು. ಆದರೆ ಈ ಬಾರಿ ಪಂತ್‌ ಆಡುವುದರಲ್ಲಿ ಅನುಮಾನವಿಲ್ಲ. ಜಡೇಜ ಬದಲು ಅಕ್ಷರ್‌ ಪಟೇಲ್‌ ಆಡುತ್ತಾರೋ ಅಥವಾ ದೀಪಕ್‌ ಹೂಡಾ ಬರುತ್ತಾರೋ ಎಂಬುದು ಖಾತ್ರಿಯಾಗಿಲ್ಲ.

ಪಾಕ್‌ ಎದುರಿನ ರೂವಾರಿಯಾಗಿ ಮೂಡಿ ಬಂದವರು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆ ರಡರಲ್ಲೂ ಸಿಡಿದು ನಿಲ್ಲುವ ಮೂಲಕ ಪಾಂಡ್ಯ ತಮ್ಮ ಪವರ್‌ ತೋರಿದ್ದರು. ಪಾಂಡ್ಯ ಅವರಿಂದ ಮತ್ತೊಮ್ಮೆ ಇಂಥದೇ ಆಟದ ನಿರೀಕ್ಷೆ ಇಡಲಾಗಿದೆ.

ವೇಗದ ಬೌಲಿಂಗ್‌ ದುರ್ಬಲ
ಭಾರತದ ವೇಗದ ಬೌಲಿಂಗ್‌ ವಿಭಾಗ ಕೂಟದಲ್ಲೇ ಅತ್ಯಂತ ದುರ್ಬಲ. ಇಲ್ಲಿ ಮೂವರನ್ನು ಬಿಟ್ಟರೆ ಮತ್ತೊಂದು ಆಯ್ಕೆಯೆಂದರೆ ಪಾಂಡ್ಯ ಮಾತ್ರ. ಭುವನೇಶ್ವರ್‌ ಕುಮಾರ್‌, ಆರ್ಷದೀಪ್‌ ಸಿಂಗ್‌ ಓಕೆ. ಆದರೆ ಆವೇಶ್‌ ಖಾನ್‌ ಸಿಕ್ಕಾಪಟ್ಟೆ ದುಬಾರಿ ಆಗುತ್ತಿದ್ದಾರೆ. ಅನನುಭವಿ ಹಾಂಕಾಂಗ್‌ ವಿರುದ್ಧವೂ ಅವರಿಗೆ ನಿಯಂತ್ರಣ ಸಾಧಿಸಲಾಗಿರಲಿಲ್ಲ. ಪಾಕ್‌ ಅಗ್ರ ಕ್ರಮಾಂಕದ ಆಟಗಾರರು ಸಿಡಿದು ನಿಂತರೆ ಸಮಸ್ಯೆ ಖಚಿತ. ಅವರ ರೈಟ್‌-ಲೆಫ್ಟ್ ಕಾಂಬಿನೇಶನ್‌ ಹೆಚ್ಚು ವೈವಿಧ್ಯಮಯವಾಗಿದೆ. ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಆದರೂ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಆಲೌಟ್‌ ಮಾಡಿದ್ದನ್ನು ಮರೆಯುವಂತಿಲ್ಲ. ಪಾಕಿಸ್ಥಾನದ ಬೌಲಿಂಗ್‌ ಸರದಿಗೂ ಒಂದು ಹೊಡೆತ ಬಿದ್ದಿದೆ. ಸ್ಟ್ರೈಕ್‌ ಬೌಲರ್‌ ಶಹನವಾಜ್‌ ದಹಾನಿ ಗಾಯಾಳಾಗಿದ್ದು, ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಇಂದಿನ ಪಂದ್ಯ
ಸೂಪರ್‌ ಫೋರ್‌
ಭಾರತ-ಪಾಕಿಸ್ಥಾನ
ಸ್ಥಳ: ದುಬಾೖ
ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next