ಹೊಸದಿಲ್ಲಿ: ಮಲೇಶ್ಯದ ಅಲೋರ್ ಸೆಟಾರ್‌ನಲ್ಲಿ ಸಾಗುತ್ತಿರುವ ಬ್ಯಾಡ್ಮಿಂಟನ್ ಏಶ್ಯ ತಂಡ ಸ್ಪರ್ಧೆಯಲ್ಲಿ ಭಾರತೀಯ ವನಿತಾ ತಂಡದ ಸವಾಲು ಕ್ವಾರ್ಟರ್‌ಫೈನಲ್‌ನಲ್ಲಿ ಅಂತ್ಯಗೊಂಡಿದೆ.
ಪಿವಿ ಸಿಂಧು ನೇತೃತ್ವದ ಭಾರತೀಯ ತಂಡ ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಇಂಡೋನೇಶ್ಯ ವಿರುದ್ಧ 1-3 ಅಂತರದಿಂದ ಸೋತಿದೆ. ಈ ಹೋರಾಟದಲ್ಲಿ ಸಿಂಧು ಮಾತ್ರ ಗೆಲುವು ದಾಖಲಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಸೋತರೂ ಭಾರತಕ್ಕೆ ಮುಂಬರುವ ಉಬೆರ್ ಕಪ್‌ಗೆ ಅರ್ಹತೆ ಗಳಿಸುವ ಅವಕಾಶವಿದೆ.
ಸಿಂಗಲ್ಸ್ ಆಟಗಾರ್ತಿ ಜಿ. ರುತ್ವಿಕಾ ಶಿವಾನಿ ಅವರ ಅನುಪಸ್ಥಿತಿಯಲ್ಲಿ ಭಾರತ ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಆಡಿತು. ಬೆನ್ನು ನೋವಿನಿಂದಾಗಿ ರುತ್ವಿಕಾ ಆಡಿರಲಿಲ್ಲ. ಅವರ ಬದಲಿಗೆ ರುತುಪರ್ಣಾ ಪಾಂಡ ಆಡಿದ್ದರು. ಮೊದಲ ಸಿಂಗಲ್ಸ್‌ನಲ್ಲಿ ಸಿಂಧು ಅವರು ಫಿತ್ರಿಯಾನಿ ಫಿತ್ರಿಯಾನಿ ಅವರನ್ನು 21-13, 24-22 ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ ಶುಭಾರಂಭ ಒದಗಿಸಿದ್ದರು. ಆದರೆ ಭಾರತ ಮುಂದಿನ ಮೂರು ಪಂದ್ಯಗಳಲ್ಲಿ ಸೋತು ಕೂಟದಿಂದ ಹೊರಬಿತ್ತು.
ದ್ವಿತೀಯ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಅವರು ವಿಶ್ವದ ಏಳನೇ ರ್‍ಯಾಂಕಿನ ಗ್ರೇಸಿಯಾ ಪೋಲಿ ಮತ್ತು ಅಪ್ರಿಯಾನಿ ರಹಾಯು ಅವರೆದುರು 5-21, 16-21 ಗೇಮ್‌ಗಳಿಂದ ಶರಣಾದರು. ಈ ಪಂದ್ಯ ಕೇವಲ 29 ನಿಮಿಷಗಳಲ್ಲಿ ಮುಗಿದಿತ್ತು. ಮೊದಲ ಗೇಮ್‌ನಲ್ಲಿ ಅಶ್ವಿನಿ-ಸಿಕ್ಕಿ ರೆಡ್ಡಿ ಯಾವುದೇ ಹೋರಾಟ ನೀಡಿರಲಿಲ್ಲ.
ಮೂರನೇ ಪಂದ್ಯದಲ್ಲಿ ಶ್ರೀಕೃಷ್ಣ ಪ್ರಿಯಾ ಕುದುರವಲ್ಲಿ ಅವರು 8-21, 15-21 ಗೇಮ್‌ಗಳಿಂದ ಹನ್ನಾ ರಮಾದಿನಿ ಅವರಿಗೆ ಶರಣಾದರು. ನಾಲ್ಕನೇ ಪಂದ್ಯದಲ್ಲಿ ಸನ್ಯೋಗಿಟಾ ಘೋರ್ಪಡೆ ಮತ್ತು ಸಿಂಧು ಅವರು ಇಂಡೋನೇಶ್ಯದ ಅಗ್ಗಿಯಾ ಶಿಟ್ಟಾ ಅವಾಂಡ ಮತ್ತು ನಿ ಕೆಟುಟ್ ಮಹಾದೇವಿ ಇಸ್ತಾರಾಣಿ ಅವರೆದುರು 9-21, 18-21 ಗೇಮ್‌ಗಳಿಂದ ಸೋತರು.