Advertisement

Asia Badminton; ಬಂಗಾರದ ಕನಸು: ಥಾಯ್ಲೆಂಡ್‌ ಎದುರಾಳಿ

11:28 PM Feb 17, 2024 | Team Udayavani |

ಶಾ ಆಲಂ (ಮಲೇಷ್ಯಾ): ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವನಿತೆಯರು ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದು, ಪ್ರಶಸ್ತಿಯ ನಿರೀಕ್ಷೆ ಮೂಡಿಸಿದ್ದಾರೆ. 2016 ಮತ್ತು 2020ರಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.

Advertisement

ಸೆಮಿಫೈನಲ್‌ನಲ್ಲಿ ಭಾರತ 2 ಬಾರಿಯ ಮಾಜಿ ಚಾಂಪಿಯನ್‌ ಜಪಾನ್‌ ವಿರುದ್ಧ 3-2 ಅಂತರದ ರೋಚಕ ಗೆಲುವು ಸಾಧಿಸಿತು.

ಸಿಂಧು ಪರಾಭವ
ಪಿ.ವಿ. ಸಿಂಧು ಜಪಾನ್‌ನ ಎಡಗೈ ಆಟಗಾರ್ತಿ ಅಯಾ ಒಹೊರಿ ವಿರುದ್ಧ 13-21, 20-22 ರಿಂದ ಸೋತರು.
ಮೊದಲ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್‌ ನಾಮಿ ಮತ್ಸುಯಮಾ – ಚಿಹಾರು ಶಿಡಾ ವಿರುದ್ಧ 21-17, 16-21, 22- 20 ಅಂತರದಿಂದ ಗೆದ್ದು ಸ್ಪರ್ಧೆಯನ್ನು 1-1 ಸಮಬಲಕ್ಕೆ ತಂದರು.

ದ್ವಿತೀಯ ಸಿಂಗಲ್ಸ್‌ನಲ್ಲಿ ನೊಜೊಮೊ ಒಕು ಹಾರಾ ವಿರುದ್ಧ ಅಶ್ಮಿತಾ ಚಾಲಿಹಾ 21-17, 21-14 ಅಂತರದ ಗೆಲುವು ಸಾಧಿಸಿದರು. ಭಾರತ 2-1ರಿಂದ ಮುನ್ನಡೆಯಿತು.

ತನಿಷಾ ಕ್ರಾಸ್ಟೊ ಗಾಯಾಳಾದ ಕಾರಣ ಪಿ.ವಿ. ಸಿಂಧು ಡಬಲ್ಸ್‌ನಲ್ಲಿ ಸೆಣಸುವುದು ಅನಿವಾರ್ಯವಾಯಿತು. ಅವರು ಹಾಗೂ ಅಶ್ವಿ‌ನಿ ಪೊನ್ನಪ್ಪ ಜತೆಗೂಡಿ ಕಣಕ್ಕಿಳಿದರು. ಆದರೆ ವಿಶ್ವದ 11ನೇ ರ್‍ಯಾಂಕಿಂಗ್‌ ಜೋಡಿಯಾದ ರೇನಾ ಮಿಯೌರಾ-ಅಯಾಕೊ ಸಕುರಾ ಮೊಟೊ ವಿರುದ್ಧ ಇವರ ಆಟ ನಡೆಯಲಿಲ್ಲ. ಜಪಾನೀ ಜೋಡಿ 21-14, 21-11ರಿಂದ ಗೆದ್ದು ಬಂದಿತು. ಸ್ಪರ್ಧೆ 2-2 ಸಮಬಲದಲ್ಲಿ ನೆಲೆಸಿತು.
ಈ ಹಂತದಲ್ಲಿ ಭಾರತಕ್ಕೆ ಸ್ಮರ ಣೀಯ ಗೆಲುವನ್ನು ತಂದಿತ್ತ ಹೆಗ್ಗಳಿಕೆ 17ರ ಹರೆಯದ ಅನ್ಮೋಲ್‌ ಖರಬ್‌ ಅವರಿಗೆ ಸಲ್ಲುತ್ತದೆ. ಅವರು ವಿಶ್ವದ 29ನೇ ರ್‍ಯಾಂಕಿಂಗ್‌ ಆಟಗಾರ್ತಿ ನತ್ಸುಕಿ ನಿದೈರಾ ವಿರುದ್ಧ 21-14, 21-18 ಅಂತರದ ಗೆಲುವು ಸಾಧಿಸಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next