Advertisement

ಪಕ್ಷಿ  ಲೋಕದ ದರ್ಜಿ: ಎಲೆಗಳನ್ನು ಹೊಲಿದು ಗೂಡು ಕಟ್ಟುವ ಟುವ್ವಿ ಹಕ್ಕಿ

07:26 PM Oct 20, 2024 | Team Udayavani |

ಸೂರ್ಯೋದಯದ ಸಮಯದಲ್ಲೇ ಮನೆಯ ಹೊರಗಿನ ಮರಗಳೆಡೆಯಿಂದ “ಟುವ್ವಿ ಟುವ್ವಿ… ಟುವ್ವಿ ಟುವ್ವಿ…’ ಎನ್ನುವ ಶಬ್ದ ಕಿವಿಗೆ ಬೀಳುತ್ತಿತ್ತು. ಇದು ಯಾವುದೋ ದೊಡ್ಡ ಹಕ್ಕಿಯ ಸ್ವರವಿರಬಹುದು ಅಂದುಕೊಂಡಿದ್ದೆ. ಕಾರಣ, ಧ್ವನಿ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಕೇಳಿಸುತ್ತಿತ್ತು. ಆದರೆ, ಅದೊಂದು ಪುಟ್ಟ ಹಕ್ಕಿಯ ಸ್ವರವೆಂದು ತಿಳಿದಾಗ ಆಶ್ಚರ್ಯವಾಯಿತು. ಗುಬ್ಬಚ್ಚಿಗಿಂತಲೂ ಪುಟ್ಟದಾದ ಹಕ್ಕಿಯ ಸ್ವರ ಇಷ್ಟು ತಾರಕಕ್ಕೇರುತ್ತದೆ ಎಂದರೆ ಅದೊಂದು ವಿಸ್ಮಯ ಅನ್ನಿಸಿತು…

Advertisement

ತೆರೆದ ಕಾಡು, ಪೊದೆ, ಉದ್ಯಾನವನಗಳಲ್ಲಿ ಹೆಚ್ಚಾಗಿ ಕಂಡು ಬರುವ ಟುವ್ವಿ ಹಕ್ಕಿ ಕೆಲವೊಮ್ಮೆ ಮನುಷ್ಯರೊಡನೆ ನಿರ್ಭಿತಿಯಿಂದ ವರ್ತಿಸುತ್ತದೆ. ಮಾನವನ ಉಪಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿರುವ ಪಕ್ಷಿಗಳಲ್ಲಿ ಇದೂ ಒಂದು. ಒಮ್ಮೊಮ್ಮೆ ಮನೆಯ ವರಾಂಡದ ಬಳಿ ಹುಳು ಹುಪ್ಪಟೆಗಳಿಗೆ ಹೊಂಚು ಹಾಕುವ ಟುವ್ವಿ ಹಕ್ಕಿಗೆ, ಮಲ್ಲಿಗೆ ಗಿಡಕ್ಕೆ ಮುತ್ತುವ ಕೀಟಗಳನ್ನು ಹಿಡಿಯುವುದೆಂದರೆ ಇನ್ನಿಲ್ಲದ ಸಂಭ್ರಮ. ಸಣ್ಣ ಕೀಟ, ಜೇಡ ಮತ್ತವುಗಳ ಮೊಟ್ಟೆ ಟುವ್ವಿ ಹಕ್ಕಿಯ ಮುಖ್ಯ ಆಹಾರ. ಅಪರೂಪಕ್ಕೊಮ್ಮೆ ಹಣ್ಣು, ಹೂವಿನ ಮಕರಂದವನ್ನೂ ಹೀರುತ್ತದೆ.

ನಾನು ಟುವ್ವಿ ಹಕ್ಕಿಯನ್ನು ಮೊದಮೊದಲು ಸಲೀಂ ಅಲಿ, ತೇಜಸ್ವಿಯವರ ಪುಸ್ತಕದಲ್ಲಿ ಮಾತ್ರವೇ ನೋಡಿದ್ದೆ. ಆದರೆ, ನಮ್ಮ ಪರಿಸರದಲ್ಲಿ ಈ ಹಕ್ಕಿ ಇದೆಯೆಂದು ಅರಿವಾದಾಗ ಅದರ ಫೋಟೋ ತೆಗೆಯಬೇಕೆಂಬ ಆಸೆಯಾಯಿತು. ಅದೊಂದು ಪುಟ್ಟ ಹಕ್ಕಿ, ಫೋಟೋ ತೆಗೆಯುವುದು ತುಸು ಕಷ್ಟವೇ… ನನ್ನಲ್ಲಿರುವ ಬೇಸಿಕ್‌ ಲೆನ್ಸ್‌ ಕ್ಯಾಮರಾ ಮೂಲಕ ಫೋಟೋ ತೆಗೆಯಬೇಕಿದ್ದರೆ ನಾನು ಆ ಹಕ್ಕಿಯ ತೀರಾ ಸಮೀಪವಿರಬೇಕಿತ್ತು. ಸರಿಸುಮಾರು ಒಂದು ವರ್ಷದವರೆಗೆ ಟುವ್ವಿ ಹಕ್ಕಿಯ ಕೂಗನ್ನು ಕೇಳಿಸಿಕೊಳ್ಳುತ್ತಿದ್ದನಾದರೂ ಅದರ ದರ್ಶನವಾದದ್ದು ತೀರಾ ಅಪರೂಪಕ್ಕೊಮ್ಮೆ ಮಾತ್ರ. ಒಂದು ದಿನ ಮಟಮಟ ಮಧ್ಯಾಹ್ನ ಹೂಗುಬ್ಬಿಯನ್ನು ಹುಡುಕಿಕೊಂಡು ಹೋಗಿದ್ದಾಗ ಟುವ್ವಿ ಹಕ್ಕಿ ನನ್ನ ಕ್ಯಾಮರಾದಲ್ಲಿ ಸೆರೆಯಾಯಿತು.

ಎಲೆಗಳನ್ನು ಹೊಲಿಯುವ ಚಮತ್ಕಾರ

ಟುವ್ವಿ ಹಕ್ಕಿ ಗೂಡು ಕಟ್ಟುವ ಬಗೆ ವಿಶಿಷ್ಟ ಮತ್ತು ಅನನ್ಯ. ಇದು ಸಸ್ಯ ನಾರುಗಳು ಹಾಗೂ ಎಲೆಗಳನ್ನು ಹೊಲಿದು ಜೋಳಿಗೆಯಂತೆ ಮಾಡಿ ಗೂಡು ಕಟ್ಟುತ್ತದೆ. ಗೂಡು ಕಟ್ಟುವಾಗ ಗರಿಗಳು ಮತ್ತು ತುಪ್ಪಳಗಳನ್ನೂ ಉಪಯೋಗಿಸುತ್ತದೆ. ಪಕ್ಷಿ ಸಂಕುಲದಲ್ಲಿ ಹೊಲಿಯುವ ಚಾಣಾಕ್ಷತೆಯನ್ನು ಮೈಗೂಡಿಸಿಕೊಂಡಿರುವ ಅಪರೂಪದ ಹಕ್ಕಿಯಿದು. ದರ್ಜಿಗಳಾದರೆ ಬಟ್ಟೆ ಹೊಲಿಯಲು ತರಬೇತಿ ಪಡೆದುಕೊಂಡಿರುತ್ತಾರೆ. ಆದರೆ ಯಾವುದೇ ತರಬೇತಿಯಿಲ್ಲದೆ ಈ ಟುವ್ವಿ ಹಕ್ಕಿ ಅದು ಹೇಗೆ ಎಲೆಗಳನ್ನು ಹೊಲಿದು ಚಂದದ ಗೂಡು ಕಟ್ಟುತ್ತದೆ ಎನ್ನುವುದು ಸೃಷ್ಟಿಯ ರಹಸ್ಯವೇ ಸರಿ. ಚೂಪಾದ ಕೊಕ್ಕಿನ ಸಹಾಯದಿಂದ ಗೂಡು ಕಟ್ಟುವ ಕೆಲಸ ಹೆಣ್ಣು ಹಕ್ಕಿಯದ್ದು. ಆದರೆ ಗೂಡು ಕಟ್ಟಲು ಅಗತ್ಯವಾಗಿ ಬೇಕಿರುವ ಸಾಮಗ್ರಿಗಳನ್ನು ತರುವುದು ಗಂಡು ಹಕ್ಕಿ. ಮೊದಲಿಗೆ ಗೂಡು ಕಟ್ಟಲು ಸ್ಥಳ ಆಯ್ಕೆ ಮಾಡಿಕೊಂಡ ಬಳಿಕ ಹೆಣ್ಣು ಹಕ್ಕಿ ವಿಶಾಲ ಮತ್ತು ಗಟ್ಟಿಯಾದ ಎಲೆಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತದೆ.

Advertisement

ಇನ್ನೂರು ಹೊಲಿಗೆಗಳ ಗೂಡು

ಒಂದೊಮ್ಮೆ ತೆಳ್ಳಗಿನ ಎಲೆಗಳಿದ್ದರೆ ಹೊಲಿಯುವ ಸಮಯದಲ್ಲಿ ಅವು ಹರಿದು ಹೋಗುವ ಸಂಭವ ಹೆಚ್ಚು. ಜೊತೆಗೆ ಮರಿಗಳ ತೂಕ ಹೆಚ್ಚಾಗಿ ಗೂಡು ಮುರಿದು ಬೀಳುವ ಸಾಧ್ಯತೆಯೂ ಅಧಿಕ. ಪರಭಕ್ಷಕಗಳಿಗೆ ಗೂಡು ಕಾಣಿಸದಂತೆ ಗೂಡುಕಟ್ಟುವ ಸವಾಲನ್ನೂ ಈ ಸಮಯದಲ್ಲಿ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಹೆಣ್ಣು ಹಕ್ಕಿ ಗಟ್ಟಿಯಾದ, ಅತ್ಯಂತ ದಪ್ಪ ಎಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಮರಿಗಳಿಗೆ ತೊಂದರೆ ಕೊಡುವ ಇತರೆ ಭಕ್ಷಕಗಳು ಗೂಡನ್ನು ಪ್ರವೇಶಿಸದಂತೆ ಎಲೆಗಳನ್ನು ಹೊಲಿಯಲು ಆರಂಭಿಸುತ್ತದೆ. ಈ ಸಮಯದಲ್ಲಿ, ಎಲೆಗಳು ಸರಿಯಾದ ಗಾತ್ರದಲ್ಲಿವೆಯೇ ಎಂದೂ ಖಚಿತಪಡಿಸಿಕೊಳ್ಳುತ್ತದೆ. ಒಂದು ವೇಳೆ ಗಾತ್ರಗಳು ಬೇರೆ ಬೇರೆಯಾಗಿದ್ದಲ್ಲಿ ಒಂದೆರಡು ಹೆಚ್ಚುವರಿ ಎಲೆಗಳನ್ನು ಸೇರಿಸಿಕೊಳ್ಳುತ್ತದೆ. ನಂತರ ಸೂಜಿಯ ಆಕಾರದಲ್ಲಿರುವ ಉದ್ದವಾದ, ತೆಳ್ಳಗಿನ ಕೊಕ್ಕಿನ ಸಹಾಯದಿಂದ ಎಲೆಯ ಅಂಚಿನಲ್ಲಿ ಸಣ್ಣ ರಂಧ್ರಗಳನ್ನು ಸರಣಿಯಂತೆ ಕೊರೆಯುತ್ತದೆ. ತನ್ನ ಕೊಕ್ಕಿನಲ್ಲಿ ದಾರ ಅಥವಾ ಸಸ್ಯ ನಾರುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ದಾರವು ಎಲೆಗಳ ಅಂಚುಗಳನ್ನು ಒಟ್ಟುಗೂಡಿಸುತ್ತದೆ. ಈ ಹೊಲಿಗೆಗಳು ಸಡಿಲಗೊಳ್ಳುವುದಿಲ್ಲ. ಒಂದು ಗೂಡು 150ರಿಂದ 200 ಹೊಲಿಗೆಗಳನ್ನು ಹೊಂದಿರುತ್ತದೆ!

ನಾಲ್ಕು ದಿನದಲ್ಲಿ ಗೂಡು ರೆಡಿ!

ಈ ಗೂಡು ಮಳೆಯಿಂದ ರಕ್ಷಣೆ ನೀಡಲು ಮತ್ತು ಸೂರ್ಯನ ಬೆಳಕಿನಿಂದ ನೆರಳು ನೀಡಲು ಛಾವಣಿಯನ್ನೂ ಹೊಂದಿದೆ. ಈ ಛಾವಣಿ ಒಂದು ಅಥವಾ ಹೆಚ್ಚು ಎಲೆಗಳಿಂದ ರಚನೆಯಾಗುತ್ತದೆ. ಇದು ಗೂಡನ್ನು ಭದ್ರಪಡಿಸಿ ಇತರೆ ಪರಭಕ್ಷಕಗಳಿಗೆ ಕಾಣದಂತೆ ಮರೆಮಾಚುತ್ತದೆ. ಒಂದು ವೇಳೆ ಗೂಡು ಕಟ್ಟುವಾಗ ನಾರು ಮತ್ತು ರೇಷ್ಮೆಯಿಂದ ಮಾಡಿದ ದಾರ ಸಡಿಲಗೊಂಡಾಗ ಅಥವಾ ಅಚಾನಕ್‌ ಆಗಿ ಎಲೆಗಳು ಹರಿದಾಗ ಹೆಣ್ಣು ಹಕ್ಕಿ ವಿಚಲಿತವಾಗುವುದಿಲ್ಲ. ಹೆಚ್ಚು ಹೆಚ್ಚು ಎಲೆಗಳನ್ನು ಮತ್ತು ಹೊಲಿಗೆಗಳನ್ನು ಸೇರಿಸುವುದರ ಮೂಲಕ ಹಾನಿಯನ್ನು ಸರಿಪಡಿಸುತ್ತದೆ. ಒಂದು ವೇಳೆ ಕಟ್ಟಿದ ಗೂಡಿಗೆ ಬಹಳಷ್ಟು ಹಾನಿಗಳಾಗಿದ್ದರೆ ಅದನ್ನು ಅಲ್ಲಿಯೇ ಬಿಟ್ಟು ಬೇರೊಂದು ಕಡೆಯಲ್ಲಿ ಹೊಸದೊಂದು ಗೂಡನ್ನು ಕಟ್ಟಲಾರಂಭಿಸುತ್ತದೆ. ಗೂಡು ಕಟ್ಟುವ ಈ ಪ್ರಕ್ರಿಯೆ ನಡೆಯುವುದು ಬೆಳಗ್ಗೆ ಅಥವಾ ಮಧ್ಯಾಹ್ನದ ಅವಧಿಯಲ್ಲಿ. ಎರಡರಿಂದ ನಾಲ್ಕು ದಿನಗಳೊಳಗಾಗಿ ಟುವ್ವಿ ಹಕ್ಕಿಯ ಬೆಚ್ಚಗಿನ ಗೂಡು ಸಿದ್ಧವಾಗುತ್ತದೆ.

ಸುಂದರ ಪಕ್ಷಿ…

ಆಂಗ್ಲ ಭಾಷೆಯಲ್ಲಿ ಕಾಮನ್‌ ಟೇಲರ್‌ ಬರ್ಡ್‌ (Common Tailor Bird) ಎಂದು ಕರೆಸಿಕೊಳ್ಳುವ ಟುವ್ವಿ ಹಕ್ಕಿ ನೋಡಲು ಬಹು ಆಕರ್ಷಕ ಮತ್ತು ಸುಂದರ. ಈ ಹಕ್ಕಿಯ ಮೇಲ್ಭಾಗ ಬಹುತೇಕ ಹಸಿರು ಬಣ್ಣ, ಕೆಳ ಭಾಗ ಬಿಳಿ ಬಣ್ಣಗಳಿಂದ ಕೂಡಿದೆ. ಗಂಡು ಹಕ್ಕಿಗೆ ಬಾಲದಲ್ಲಿ ಎರಡು ಪುಕ್ಕಗಳು ಉದ್ದವಾಗಿರುವುದು ವಿಶೇಷ. ಇದೊಂದೇ ಗಂಡು ಮತ್ತು ಹೆಣ್ಣು ಹಕ್ಕಿಗಳಿಗಿರುವ ವ್ಯತ್ಯಾಸ. ಬಣ್ಣದ ಆಧಾರದಲ್ಲಿ ವ್ಯತ್ಯಾಸವಿಲ್ಲ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಗೂಡುಕಟ್ಟುವ ಟುವ್ವಿ ಹಕ್ಕಿ, 3-4 ಮೊಟ್ಟೆಗಳನ್ನಿಡುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಗೂಡಿನ ಕೆಲಸಗಳನ್ನು ಜೊತೆಯಾಗಿ ನಿರ್ವಹಿಸುತ್ತವೆ. ಆದರೆ, ಕಾವು ಕೊಡುವ ಕೆಲಸ ಮಾತ್ರ ಹೆಣ್ಣು ಹಕ್ಕಿಯದ್ದು.

-ನವೀನ ಕೃಷ್ಣ ಎಸ್‌. ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next