Advertisement

ಅಂಧರ ಪಾಲಿನ “ಬೆಳಕು’ಅಶ್ವಿ‌ನಿ

06:30 PM Dec 07, 2020 | Karthik A |

ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾದವರು ಹಲವರಿದ್ದಾರೆ. ನಾವು ಈಗ ಹೇಳ ಹೊರಟಿರುವುದೂ ಅಂತಹ ಮೇರು ವ್ಯಕ್ತಿತ್ವದ ಬಗ್ಗೆಯೇ.

Advertisement

ತಾನು ಹುಟ್ಟುತ್ತಲೇ ಅಂಧೆಯಾಗಿದ್ದರೂ ಅದಕ್ಕಾಗಿ ಕೊರಗದೆ ಇತರರ ಬಾಳಿಗೆ “ಬೆಳಕು’ ಹರಿಸಿದ ಹೆಮ್ಮೆಯ ಕನ್ನಡತಿ ಅಶ್ವಿ‌ನಿ ಅಂಗಡಿ ಅವರ ಸಾಹಸಗಾಥೆ ಇದು. ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಕೊರಗುವವರಿಗೆ ಸ್ಫೂರ್ತಿಯಾಗಬಲ್ಲದು ಅಶ್ವಿ‌ನಿ ಅವರ ಸಾಧನೆ.

ಮೂಲತಃ ಬಳ್ಳಾರಿ ಜಿಲ್ಲೆಯ ಚೆಲಗುರ್ಕಿಯ ಅಶ್ವಿ‌ನಿ ಅಂಗಡಿ ಹುಟ್ಟುತ್ತಲೇ ದೃಷ್ಟಿ ದೋಷ ಹೊಂದಿದ್ದರು. ಆದರೆ ಅದು ಅವರ ಸಾಧನೆಗೆ ಅಡ್ಡಿ ಆಗಿರಲೇ ಇಲ್ಲ. ಆಕೆಯ ಆತ್ಮವಿಶ್ವಾಸ, ಛಲ ಮುಂದೆ ಅಂಗವೈಕಲ್ಯವೂ ಮಂಡಿಯೂರಿ ಬಿಟ್ಟಿತ್ತು. ಪದವಿ ಶಿಕ್ಷಣ ಪೂರೈಸಿರುವ ಅಶ್ವಿ‌ನಿ ಅಂಧ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಸ್ವಂತ ಶಾಲೆಯೊಂದನ್ನು ತೆರೆದು ಅವರಿಗೆ ಉಚಿತ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ತರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶಿಕ್ಷಣ
ಅಶ್ವಿ‌ನಿ ಬೆಂಗಳೂರಿನ ಜೆಪಿ ನಗರದಲ್ಲಿರುವ ರಮಣಶ್ರೀ ಅಂಧರ ಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ನಡೆಸಿ ಮಹಾರಾಣಿ ಕಾಲೇಜಿನಲ್ಲಿ ಪದವಿ ಪೂರ್ತಿಗೊಳಿಸಿದರು. ಅಂಧ ಹುಡುಗಿಯಾಗಿ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಪಡೆಯುವುದು ಸುಲಭದ ಮಾತಾಗಿರಲಿಲ್ಲ. ಆಗ ಅವರು ಎದುರಿಸಿದ ಸವಾಲುಗಳು ಅನೇಕ. “ಬ್ರೈಲ್‌ ಲಿಪಿಯ ಪುಸ್ತಕ ಕೊರತೆ ಇದ್ದುದರಿಂದ ಸಾಮಾನ್ಯ ಪ್ರಿಂಟ್‌ನಲ್ಲೇ ನಾನು ಅಭ್ಯಾಸ ನಡೆಸಬೇಕಿತ್ತು.

ತರಗತಿ ಮುಗಿದ ಅನಂತರ ನನಗೆ ಇತರರು ನೋಟ್ಸ್‌ ಓದಿ ಹೇಳಬೇಕಿತ್ತು. ಅನೇಕ ಉಪನ್ಯಾಸಕರು ರೆಕಾರ್ಡ್‌ ಮಾಡಲು ಅನುಮತಿ ನೀಡದ ಕಾರಣ ಪ್ರತೀ ದಿನ 5-6 ಗಂಟೆ ಅಭ್ಯಾಸಕ್ಕಾಗಿ ಮೀಸಲಿಡುತ್ತಿದ್ದೆ’ ಎಂದು ಸ್ಮರಿಸಿಕೊಳ್ಳುತ್ತಾರೆ. ಈಗ ಪರಿಸ್ಥಿತಿ ಸುಧಾರಿಸಿದೆ. ಜೂನಿಯರ್‌ಗಳಿಗೆ ಸೂಕ್ತ ಅಧ್ಯ ಯನ ಸಾಮಗ್ರಿ ಲಭಿಸುತ್ತಿದೆ’ ಎಂದು ಅಶ್ವಿ‌ನಿ ಸಂತಸ ವ್ಯಕ್ತಪಡಿಸುತ್ತಾರೆ. ಪದವಿ ಬಳಿಕ ಎನ್‌ಜಿಒ ಒಂದಕ್ಕೆ ಸೇರಿದ ಅಶ್ವಿ‌ನಿ, ಅಲ್ಲಿ ಅಂಗವಿಕಲರಿಗಾಗಿ ದೇಶೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತತೊಡಗಿದರು.

Advertisement

ಅಂಧರ ಬಾಳಿಗೆ “ಬೆಳಕು’
ಅಂಧ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಅಶ್ವಿ‌ನಿ 2014ರಲ್ಲಿ ಬೆಂಗಳೂರಿನಲ್ಲಿ “ಅಶ್ವಿ‌ನಿ ಅಂಗಡಿ ಟ್ರಸ್ಟ್‌’ ಮತ್ತು “ಬೆಳಕು ಅಕಾಡೆಮಿ’ ಎನ್ನುವ ವಸತಿಯುತ ಶಾಲೆ ಆರಂಭಿಸಿದರು. ಈ ಶಾಲೆಯಲ್ಲಿ ಅಂಧ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ರಾಜ್ಯದ ಗ್ರಾಮ ಪಂಚಾಯತ್‌ಗಳಿಂದ ಅಂಧರ ಕುರಿತು ಮಾಹಿತಿ ಸಂಗ್ರಹಿಸಿ ಅವರಿಗಾಗಿ ಏನು ಮಾಡಬಹುದು ಎನ್ನುವುದನ್ನು ವಿವರಿಸುವುದು ಈ ಟ್ರಸ್ಟ್‌ನ ಕಾರ್ಯ ವೈಖರಿ. ತಂತ್ರಜ್ಞಾನ, ಸೌಕರ್ಯದಲ್ಲಿ ಖಾಸಗಿ ವಸತಿಯುತ ಶಾಲೆಗಳಿಂತ ಬೆಳಕು ಅಕಾಡೆಮಿ ಕಡಿಮೆ ಏನಿಲ್ಲ.

ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತದೆ ಮತ್ತು ಪ್ರಯೋಗಗಳ ಮೂಲಕ ವಿಜ್ಞಾನ ಬೋಧಿಸಲಾಗುತ್ತದೆ. ಇನ್ನೊಂದು ವಿಶೇಷತೆ ಎಂದರೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತದೆ. ಪ್ರತ್ಯೇಕ ಪ್ರಯೋಗ ಶಾಲೆ, ಡಿಜಿಟಲ್‌ ಗ್ರಂಥಾಲಯ, ಪ್ರತ್ಯೇಕ ಹೆಡ್‌ಫೋನ್‌ ಒದಗಿಸಲಾಗುತ್ತದೆ. 10 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಾಲೆ ಈಗ ಮೂವತ್ತೈದಕ್ಕಿಂತ ಅಧಿಕ ವಿದ್ಯಾರ್ಥಿಗಳ ಬಾಳಿಗೆ ಬೆಳಕು ಹರಿಸುತ್ತಿದೆ. “ದೃಷ್ಟಿ ದೋಷ ಇರುವವರೂ ಇತರರಂತೆ ಸಾಮಾನ್ಯ ಜೀವನ ನಡೆಸಬೇಕು. ಅವರು ಸ್ವತಂತ್ರವಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ಶಾಲೆ ಆರಂಭಿಸಿದೆ’ ಎನ್ನುತ್ತಾರೆ ಅಶ್ವಿ‌ನಿ.

ಅಂತಾರಾಷ್ಟ್ರೀಯ ಗೌರವ
ಅಂಗವಿಕಲರಿಗಾಗಿ ಸಲ್ಲಿಸಿದ ಸೇವೆ ಪರಿಗಣಿಸಿ ಅನೇಕ ಪ್ರಶಸ್ತಿ, ಗೌರವ ಅಶ್ವಿ‌ನಿ ಅವರನ್ನು ಹುಡುಕಿಕೊಂಡು ಬಂದಿವೆ. ಮಲಾಲ ಡೇ ದಿನಾಚರಣೆಯ ಅಂಗವಾಗಿ 2013ರ ಜುಲೈಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆ ಗಾರ್ಡ್‌ನ್‌ ಬ್ರೌನ್‌ ಪ್ರಶಸ್ತಿ ನೀಡಿದೆ. ಇಂಗ್ಲೆಂಡ್‌ನ‌ ರಾಣಿ ಎಲಿಜಬೆತ್‌ ನೀಡುವ 2015ರ ಕ್ವೀನ್ಸ್‌ ಯಂಗ್‌ ಲೀಡರ್‌ ಅವಾರ್ಡ್‌ ಪಡೆದ ಮೂವರು ಭಾರತೀಯರ ಪೈಕಿ ಅಶ್ವಿ‌ನಿ ಕೂಡ ಒಬ್ಬರು.

Advertisement

Udayavani is now on Telegram. Click here to join our channel and stay updated with the latest news.

Next