ನಟ ವಿಜಯ ರಾಘವೇಂದ್ರ ಭಿನ್ನ-ವಿಭಿನ್ನ ಪಾತ್ರ, ಸಿನಿಮಾಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಇದೇ ರೀತಿ ಹೊಸ ಗೆಟಪ್ನಲ್ಲಿ ಅವರು ಕಾಣಿಸಿಕೊಂಡಿರುವ ಸಿನಿಮಾ “ರಿಪ್ಪನ್ ಸ್ವಾಮಿ’.
ಮಲೆನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಪಂಚಾನನ ಫಿಲಂಸ್ ನಿರ್ಮಾಣದ ಈ ಸಿನಿಮಾವನ್ನು ಕಿಶೋರ್ ಮೂಡುಬಿದ್ರೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಮಾಲ್ಗುಡಿ ಡೇಸ್’ ಸಿನಿಮಾ ಮಾಡಿದ್ದ ಕಿಶೋರ್ ಈಗ ಹೊಸ ಜಾನರ್ ಪ್ರಯತ್ನಿಸಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ.
ನಟಿ ಅಶ್ವಿನಿ ಚಂದ್ರಶೇಖರ್ ಮೂಲತಃ ಶಿವಮೊಗ್ಗದವರು. ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಎಂಜಿನಿಯರಿಂಗ್ ಮುಗಿಸಿದ ಅಶ್ವಿನಿ ಅವರಿಗೆ, ಸೆಳೆದಿದ್ದು ಚಿತ್ರೋದ್ಯಮ. ಸೀದಾ ಈ ಕಡೆ ಬಂದ ಎಂಜಿನಿಯರ್ ತಮ್ಮ ನಟನಾ ಕೌಶಲ್ಯದಿಂದ ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ತಮ್ಮದೇ ಸ್ಥಾನ ಪಡೆದರು. ಅಶ್ವಿನಿ ಅವರು ಒಳ್ಳೆಯ ಡ್ಯಾನ್ಸರ್ ಕೂಡ. ಅದರಲ್ಲೂ ನೃತ್ಯದಲ್ಲಿ ವಿದ್ವತ್ ಮುಗಿಸಿದ್ದಾರೆ.
ಈಗಾಗಲೇ ನಟಿ ಅಶ್ವಿನಿ ಚಂದ್ರಶೇಖರ್ ಕನ್ನಡದಲ್ಲಿ ಪ್ರೇಮ ಪಲ್ಲಕ್ಕಿ, ಒಂದು ರೋಮ್ಯಾಂಟಿಕ್ ಕ್ರೈಂ ಕತೆ, ಆಕ್ಟೋಪಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಪ್ರೇಮ್ ಕಹಾನಿ, ಮಧ್ಯಲೋ ಪ್ರಭಾಸ್ ಪಳ್ಳಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲೂ ನಟಿಸಿರುವ ನಟಿ, ಮೆರ್ಲಿನ್, ಪರಂಜು ಸೆಲ್ಲವ, ಕಾಲ್ ಟ್ಯಾಕ್ಸಿ, ಜಿವಿ2 ಸಿನಿಮಾದಲ್ಲಿ ನಟಿಸಿದ್ದಾರೆ. ಜಿವಿ2ಗೆ ಬೆಸ್ಟ್ ಡೆಬ್ಯು ಅವಾರ್ಡ್ ಕೂಡ ಬಂದಿದೆ. ಸದ್ಯ ಜಿ3 ಸಿನಿಮಾದಲ್ಲಿ ತೊಡಗಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಅಶ್ವಿನಿ ಬಿಝಿ ನಟಿಯಾಗಿದ್ದಾರೆ. ಸದ್ಯಕ್ಕೆ ತಮಿಳಿನಲ್ಲಿ ಎರಡು ಸಿನಿಮಾ ರಿಲೀಸ್ಗೆ ರೆಡಿ ಇದೆ. ಮಲಯಾಳಂನಲ್ಲಿ ಎರಡು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ರಿಪ್ಪನ್ ಸ್ವಾಮಿ ರಿಲೀಸ್ ಆಗಬೇಕಿದೆ.
ರಿಪ್ಪನ್ ಸ್ವಾಮಿ ಚಿತ್ರದ ತಾರಾಗಣದಲ್ಲಿ ಪ್ರಕಾಶ್ ತುಮ್ಮಿನಾಡು, ವಜ್ರಧೀರ್ ಜೈನ್, ಯಮುನಾ ಶ್ರೀನಿಧಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ನೀಡುತ್ತಿದ್ದಾರೆ. ರಂಗನಾಥ್ ಸಿ ಎಂ ಕ್ಯಾಮರಾ ಹಿಡಿದಿದ್ದಾರೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿ ತೆರೆಕಾಣಲಿದೆ.