ಡೊಮಿನಿಕಾ: ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 12 ವಿಕೆಟ್ ಕಿತ್ತು ಮಿಂಚಿದ್ದಾರೆ. ಅಶ್ವಿನ್ ದಾಳಿಗೆ ಬೆಚ್ಚಿದ ವಿಂಡೀಸ್ ಎರಡೂ ಇನ್ನಿಂಗ್ಸ್ ಗಳಲ್ಲಿ ಅಗ್ಗಕ್ಕೆ ಗಂಟುಮೂಟೆ ಕಟ್ಟಿದೆ.
ಡೊಮಿನಿಕಾ ಪಂದ್ಯದಲ್ಲಿ ರವಿ ಅಶ್ವಿನ್ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ಏಳು ವಿಕೆಟ್ ಪಡೆದು ಮಿಂಚಿದರು. ಒಟ್ಟು ಪಂದ್ಯದಲ್ಲಿ 131 ರನ್ ನೀಡಿದ ಅವರು 12 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಅವರು ಹಲವು ದಾಖಲೆ ಬರೆದರು.
ಅಶ್ವಿನ್ ಎಂಟನೇ ಬಾರಿ ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಪಡೆದ ಸಾಧನೆ ಮಾಡಿದರು. ಅನಿಲ್ ಕುಂಬ್ಳೆ ಕೂಡಾ ಎಂಟು ಬಾರಿ ಈ ಸಾಧನೆ ಮಾಡಿದ್ದರು.
ಅಶ್ವಿನ್ ಆರನೇ ಬಾರಿಗೆ ಎರಡು ಇನ್ನಿಂಗ್ ಗಳಲ್ಲಿ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಇದು ಭಾರತೀಯ ಬೌಲರ್ ನ ಸಾಧನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ (11 ಬಾರಿ)
ಒಟ್ಟಾರೆಯಾಗಿ ಅಶ್ವಿನ್ ಅವರು 34 ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರು. ಮುತ್ತಯ್ಯ ಮುರಳೀಧರನ್ (67), ಶೇನ್ ವಾರ್ನ್ (37), ಸರ್ ರಿಚರ್ಡ್ ಹ್ಯಾಡ್ಲಿ (36) ಮತ್ತು ಅನಿಲ್ ಕುಂಬ್ಳೆ (35) ಈ ಸಾಧನೆ ಮಾಡಿದ್ದಾರೆ. ಅಶ್ವಿನ್ ರಂಗನಾ ಹೆರಾತ್ ಜೊತೆಗೆ ಐದನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧ 100 ಅಂತರಾಷ್ಟ್ರೀಯ ವಿಕೆಟ್ ಗಳನ್ನು ಪೂರ್ಣಗೊಳಿಸಿದರು. ಅವರು ಈಗ ನಾಲ್ಕು ವಿಭಿನ್ನ ಎದುರಾಳಿಗಳ ವಿರುದ್ಧ100 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಹೊಂದಿದ್ದಾರೆ. ಕಪಿಲ್ ದೇವ್ ಕೂಡಾ ನಾಲ್ಕು ಭಿನ್ನ ಎದುರಾಳಿಗಳ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಭಾರತೀಯರ ಈ ಪಟ್ಟಿಯಲ್ಲಿ ಕುಂಬ್ಳೆ ಆರು ಭಿನ್ನ ಎದುರಾಳಿ ದೇಶಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.