ಬೆಂಗಳೂರು: ಮಿಸ್ಟರ್ ಡಿಕೆಶಿ ಗೂಂಡಾಗಿರಿ ಬಿಡಿ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರಬೇಡಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿರುಗೇಟು ಮಾಡಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಮನಗರಕ್ಕೂ ನನಗೂ ಏನು ಸಂಬಂಧ ಎಂದು ಕೇಳುವ ಡಿ.ಕೆ.ಶಿವಕುಮಾರ್ ಪ್ರಶ್ನೆಗೆ ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎಂಬ ನನ್ನ ಪೂರ್ಣ ಹೆಸರು ನೆನಪಿಸಬೇಕಿದೆ ಎಂದು ಹೇಳಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಸರಕಾರದ ವತಿಯಿಂದ ಏರ್ಪಡಿಸಿದ್ದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿ, ಗೂಂಡಾಗಿರಿ ಪ್ರದರ್ಶಿಸಿದ್ದು ಖಂಡನೀಯ.
ರಾಮನಗರ ಜಿಲ್ಲೆಗೆ ದೊಡ್ಡ ಇತಿಹಾಸವಿದೆ. ನಾಡಪ್ರಭು ಕೆಂಪೇಗೌಡ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾನಾಥ ಸ್ವಾಮೀಜಿಗಳು ಈ ಜಿಲ್ಲೆಯಲ್ಲೇ ಜನಿಸಿದ ಪುಣ್ಯಪುರುಷರು. ಜೊತೆಗೆ ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರು ಜಿಲ್ಲೆಯನ್ನು ಪ್ರತಿನಿಧಿಸಿರುವ ಪರಂಪರೆ ಇದೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ದುರುದ್ದೇಶಪೂರ್ವಕವಾಗಿಯೇ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಮೂಲಕ ಜಿಲ್ಲೆಯ ಸಂಸ್ಕೃತಿಗೆ ಮಸಿ ಬಳಿದಿದ್ದಾರೆ’ ಎಂದು ಹರಿಹಾಯ್ದರು.
ಮುಖ್ಯಮಂತ್ರಿಗಳು ಬಂದಾಗ ಪಕ್ಷಾತೀತವಾಗಿ ಗೌರವಿಸಬೇಕು. ಇಷ್ಟಕ್ಕೂ ನಾವು ಆಯೋಜಿಸಿದ್ದು ಸರಕಾರದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಶುರುವಿನಿಂದಲೂ ಅಡ್ಡಿಪಡಿಸಬೇಕು ಎನ್ನುವ ಪಿತೂರಿ ಕಾಂಗ್ರೆಸ್ ಕಾರ್ಯಕರ್ತರದಾಗಿತ್ತು. ಇವರ ಈ ವರ್ತನೆಯಿಂದ ರಾಮನಗರ ಜಿಲ್ಲೆಯ ಜನ ರಾಜ್ಯದ ಮುಂದೆ ತಲೆ ತಗ್ಗಿಸುವಂತಾಯಿತು. ಈ ಕೃತ್ಯದಿಂದ ತಮಗೆ ಅತೀವ ನೋವಾಗಿರುವುದು ನಿಜ. ಆದರೆ, ಇಂತಹ ಕಿಡಿಗೇಡಿತನವನ್ನು ಮಟ್ಟ ಹಾಕಲಾಗುವುದು’ ಎಂದು ಅವರು ಖಡಕ್ಕಾಗಿ ಎಚ್ಚರಿಸಿದರು.
`ಬಿಜೆಪಿ ನೇತೃತ್ವದ ಸರಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕಾಂಗ್ರೆಸ್ಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಮುಖ್ಯಮಂತ್ರಿಗಳಿಗೇ ಆಗಲಿ, ಸಚಿವರಿಗೇ ಆಗಲಿ, ಹೀಗೆಯೇ ಮಾತನಾಡಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಇಂತಹ ಅನಾಗರಿಕತೆಯನ್ನು ನಾವು ಎಳ್ಳಷ್ಟೂ ಸಹಿಸಿಕೊಳ್ಳುವುದಿಲ್ಲ,’ ಎಂದು ಅಶ್ವತ್ಥನಾರಾಯಣ ಗರಂ ಆದರು.
ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಸಂಸ್ಕೃತಿಗೆ ಕಳಂಕ ಮೆತ್ತಿದ್ದಾರೆ. ಇದಕ್ಕಾಗಿ ಅವರು ಜನತೆಯ ಕ್ಷಮೆ ಕೋರಬೇಕು. ಇದು ಕಾಂಗ್ರೆಸ್ಸಿನ ಸಂಸ್ಕೃತಿ ಎಷ್ಟು ಕೀಳು ಮಟ್ಟದ್ದು ಎನ್ನುವುದನ್ನು ತೋರಿಸುತ್ತದೆ. ಇಂಥವರಿಗೆ ಹೇಗೆ ಪಾಠ ಕಲಿಸಬೇಕೆನ್ನುವುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಅವರು ಹೇಳಿದರು.