ಬೆಂಗಳೂರು: ಬಿಎಂಎಸ್ ಟ್ರಸ್ಟ್ ಹಗರಣದ ವಿಚಾರದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಮತ್ತೊಮ್ಮೆ ಕಟಕಟೆಯಲ್ಲಿ ನಿಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, “ತಾವು ಕ್ಲೀನ್ ಎಂದು ವಿಧಾನಸಭೆಯಲ್ಲಿ ಕೊಚ್ಚಿಕೊಂಡ ಸಚಿವ ಅಶ್ವತ್ಥನಾರಾಯಣ, ಸಾರ್ವಜನಿಕ ಸ್ವತ್ತಾದ ಬಿಎಂಎಸ್ ಟ್ರಸ್ಟ್ ಹೊಡೆದುಕೊಂಡ ವ್ಯಕ್ತಿಯ ಜತೆ ನೇರವಾಗಿ ಶಾಮೀಲಾಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಬಿಎಂಎಸ್ ಟ್ರಸ್ಟ್ ಅನ್ನು ಹೈಜಾಕ್ ಮಾಡುತ್ತಿರುವ ಉದ್ಯಮಿ ದಯಾನಂದ ಪೈ ಹಾಗೂ ಸಚಿವ ಅಶ್ವತ್ಥನಾರಾಯಣ ಇಬ್ಬರೂ ಕುಟುಂಬ ಸಮೇತ ನಿಕಟವಾಗಿ ಆಪ್ತ ಮಾತುಕತೆಯಲ್ಲಿ ತೊಡಗಿರುವ ಫೋಟೋ ಒಂದನ್ನು ಬಿಡುಗಡೆ ಮಾಡಿದರು.
ಬಿಎಂಎಸ್ ಟ್ರಸ್ಟ್ ಖಾಸಗಿ ಶಕ್ತಿಗಳ ಪಾಲಾಗುವಲ್ಲಿ ಸಚಿವ ಅಶ್ವತ್ಥನಾರಾಯಣ ಪಾತ್ರ ದೊಡ್ಡದು. ಅದಕ್ಕೆ ಈ ಫೋಟೋ ಕೂಡ ಒಂದು ಸಾಕ್ಷಿ. ಈಗಾಗಲೇ ನಾನು ಸದನದಲ್ಲಿ ಅನೇಕ ಮಹತ್ವದ ಸಾಕ್ಷ್ಯಗಳನ್ನು ಮಂಡಿಸಿದ್ದೇನೆ. ಆದರೆ, ಸರ್ಕಾರ ತನಿಖೆಗೆ ಒಪ್ಪಲಿಲ್ಲ. ಬಿಎಂಎಸ್ ಟ್ರಸ್ಟ್‌ನದು ನಾನೇನೂ ತಿಂದಿಲ್ಲ ಎಂದು ಅಶ್ವತ್ಥನಾರಾಯಣ ಸದನದಲ್ಲಿ ಸುಳ್ಳು ಹೇಳಿದ್ದಾರೆ. ಆದರೆ, ಟ್ರಸ್ಟ್ ಲಪಟಾಯಿಸಲು ಹೊರಟಿರುವ ವ್ಯಕ್ತಿಯ ಜತೆ ಅವರು ಹೊಂದಿರುವ ಸಂಬಂಧ ಎಂತಹದು ಎನ್ನುವುದಕ್ಕೆ ನಾನು ಬಿಡುಗಡೆ ಮಾಡಿರುವ ಫೋಟೋ ಪ್ರಮುಖ ದಾಖಲೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಎಂಎಸ್ ಟ್ರಸ್ಟ್ ಸರ್ಕಾರದ ಸ್ವತ್ತು. ಅದು ಖಾಸಗಿಯವರ ಪಾಲಾಗಲು ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ಆ ಟ್ರಸ್ಟ್ ಅನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು. ವಿಧಾನ ಮಂಡಲ ಅಧಿವೇಶನದಲ್ಲಿ ನಾನು ಈ ಟ್ರಸ್ಟಿನ ದಾಖಲೆಗಳನ್ನು ಇಟ್ಟರೆ ಒಬ್ಬರೂ ಮಾತನಾಡಲಿಲ್ಲ. ಇದನ್ನು ನಾನು ಇಲ್ಲಿಗೆ ಬಿಡೋದಿಲ್ಲ. ಸರ್ಕಾರ ಬರಲಿ ಅಂತ ಕಾಯ್ತಾ ಇದ್ದೀನಿ. ಇಂದು ನಮ್ಮ ಕುಟುಂಬದ ಬಗ್ಗೆ ಮಾತಾಡೋದಲ್ಲ. ಯಾವನಿಗೆ ಲೂಟಿ ಹೊಟೆಯಲು ಈ ಸಂಸ್ಥೆ ಕೊಟ್ಟಿದ್ದಾರೆ ಇವರು. ನಾಚಿಕೆ ಆಗಬೇಕು ಇವರಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಯಾನಂದ ಪೈ ಅವರ ಪುತ್ರ ನಮ್ಮ ಪಕ್ಷದ ಮುಖಂಡ. ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಮನೆಗೆ ಊಟಕ್ಕೆ ಆಹ್ವಾನ ಇತ್ತು. ಆದರೆ, ಗೂಢಾಚಾರಿಕೆ ಮೂಲಕ ಫೋಟೋ ಇಟ್ಟುಕೊಂಡು ಕೀಳು ಮಟ್ಟದ ರಾಜಕೀಯಕ್ಕೆ ಎಚ್.ಡಿ.ಕುಮಾರಸ್ವಾಮಿ ಇಳಿದಿರುವುದು ದುರಂತ.
– ಡಾ.ಸಿ.ಎನ್.ಅಶ್ವತ್ಥನಾರಾಯಣ
ಸಿ.ಟಿ.ರವಿಗೆ ಎಚ್‌ಡಿಕೆ ಗುದ್ದು
ಬೆಂಗಳುರು: ಕುಮಾರಸ್ವಾಮಿಯವರ ಸಾಮರ್ಥಯ ಮನೆ, ಊರು ದಾಟಿದೆ ಎಂದು ತಮ್ಮ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ.
ನಾನು ಸಿ.ಟಿ. ರವಿ ಸುದ್ದಿಗೇ ಹೋಗಿಲ್ಲ. ಅವರೇ ಕಾಲು ಕೆರೆದುಕೊಂಡು ಕಿತಾಪತಿ ಮಾಡುತ್ತಿದ್ದಾರೆ. ನಾನು ಹೇಳಿದ್ದೇನು? ಅವರು ಹೇಳುತ್ತಿರುವುದೇನು? ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ತಾಕೀತು ಮಾಡಿದರು.
ಅಮಾಯಕ ಕುಟುಂಬದ ಮೇಷ್ಟ್ರು ಒಬ್ಬರು ಕೆಆರ್‌ಎಸ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅವರು ಯಾಕೆ ಸತ್ತರು? ಅದಕ್ಕೂ, ಸಿಟಿ ರವಿ ಅವರಿಗೆ ಇರುವ ಸಂಬಂಧ ಏನು? ಇದಕ್ಕೆ ಅವರು ಯಾಕೆ ಉತ್ತರ ಕೊಡುತ್ತಿಲ್ಲ, ಇವರೆಲ್ಲಾ ಸಾಚಾಗಳು, ಇವರೇನು ಪತಿವೃತರಾ? ನಾನು ಕಾಣದೇ ಇರುವವರಾ ಇವರೆಲ್ಲ? ನಮ್ಮ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ ಎಂದು ಕುಮಾರಸ್ವಾಮಿ ಕಿಡಿಕಾರಿದರು.