Advertisement

ಡಿಜೆ ಹಳ್ಳಿ ಗಲಭೆಯ ಎನ್‌ಐಎ ವರದಿ ಆಧಾರದಡಿ ಜಮೀರ್ ಮೇಲೆ ಕೇಸ್ ಹಾಕಿ: ಅಶ್ವತ್ಥ್ ನಾರಾಯಣ

04:35 PM Feb 25, 2021 | Team Udayavani |

ಕಲಬುರಗಿ: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣವನ್ನು ರಾಷ್ಟೀಯ ತನಿಖಾ ದಳ (ಎನ್‌ಐಎ) ಪೂರ್ವ ನಿಯೋಜಿತ ಕೃತ್ಯ ಎಂದು ವರದಿ ನೀಡಿದ್ದು, ಈ ವರದಿ ಆಧಾರ ಮೇಲೆ ಗಲಭೆಕೋರರನ್ನು ಅಮಾಯಕರೆಂದು ಕರೆದಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಕೇಸ್ ದಾಖಲಿಸಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದೇ ಕಾಂಗ್ರೆಸ್ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮನೆ ದಾಳಿ ಮಾಡಿ ಬೆಂಕಿ ಹಚ್ಚಿದ್ದರೂ, ಗಲಾಟೆ ಮಾಡಿದವರನ್ನು ಅಮಾಕರರೆಂದು ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ತನಿಖಾ ಸಂಸ್ಥೆಯು ಇದೊಂದು ಪೂರ್ವ ನಿಯೋಜಿತ ಗಲಭೆ. ಈ ಘಟನೆಗೆ ನವೀನ್ ಕುಮಾರ ಎಂಬಾತನ ಅವಹೇಳನ ಕಾರಣ. ಆತನಿಂದಲೇ ಗಲಭೆ ನಡೆದಿದೆ ಎನ್ನುವುದೆಲ್ಲ ಸತ್ಯವಲ್ಲ. ಆತನನ್ನು ‘ಹರಕೆಯ ಕುರಿ’ ಮಾಡಲಾಗಿದೆ ಎಂದು 7 ಸಾವಿರ ಪುಟಗಳ ವರದಿ ನೀಡಿದೆ. ಹೀಗಾಗಿ ಕುರಿತು ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸ್ಪಷ್ಟೀಕರಣ ನೀಡಲಿ ಎಂದು ಸವಾಲು ಹಾಕಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಲಂ 370 ರದ್ದು, ತ್ರಿವಳಿ ತಲಾಖ್ ನಿಷೇಧ ಮತ್ತು ರಾಮಮಂದಿರ ನಿರ್ಮಾಣದ ಪರವಾಗಿ ಸುಪ್ರೀಂಕೋರ್ಟ್ ಆದೇಶ ನೀಡಿದ ಕಾರಣ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳು ಕೂಡಿಕೊಂಡು ಸಂಚು ರೂಪಿಸಿ ಗಲಭೆ ನಡೆಸಿವೆ. ಅದು ಕೂಡ ಕೃಷ್ಣ ಜನ್ಮಾಷ್ಠಮಿ ದಿನವನ್ನೇ ಆಯ್ಕೆ ಮಾಡಿಕೊಂಡು ಕೃತ್ಯ ನಡೆಸಲಾಗಿದೆ. ಇಂತಹ ಭಯೋತ್ಪಾದನ ಕೆಲಸದಲ್ಲಿ ತೊಡಗಿದವರಿಗೆ ಕಾಂಗ್ರೆಸ್ ನಾಯಕರು ಸಹಕಾರ ನೀಡುತ್ತಿದ್ದಾರೆ ಎಂದು ದೂರಿದರು.

ಎಸ್ ಡಿಪಿಐ ಮತ್ತು ಪಿಎಫ್ ಐ ಮೇಲೆ ನಿಷೇಧದ ಹೇರುವ ಪ್ರತಿಕ್ರಿಯಿಸಿದ ಅವರು, ಇವು ರಾಜಕೀಯ ಪಕ್ಷಗಳು ಸಹ ಆಗಿರುವುದರಿಂದ ರಾಜ್ಯ ಸರ್ಕಾರಕ್ಕೆ ನಿಷೇಧಿಸುವ ಅಧಿಕಾರ ಇಲ್ಲ. ಆದರೆ, ಎರಡೂ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆಯಲಿದೆ ಎಂದಷ್ಟೇ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ನೂತನ ವಕ್ತಾರ, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಮುಖಂಡರಾದ ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ, ಅರುಣ ಕುಲಕರ್ಣಿ, ಬಾಬುರಾವ ಹಗರಗುಂಡಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next