Advertisement

Chamarajanagara: ಗಮನ ಸೆಳೆದ ಅಶ್ವಘೋಷ ನಾಟಕ ಪ್ರಯೋಗ

11:30 AM Aug 08, 2023 | Team Udayavani |

ಚಾಮರಾಜನಗರ:  ನಗರದ ಶಾಂತಲಾ ಕಲಾವಿದರು ತಂಡ ಡಾ. ರಾಜ್‌ಕುಮಾರ್ ರಂಗಮಂದಿರದಲ್ಲಿ ಭಾನುವಾರ ಸಂಜೆ ಪ್ರಯೋಗಿಸಿದ ಅಶ್ವಘೋಷ ನಾಟಕ ತನ್ನ ವಿಶಿಷ್ಟ ಕಥಾ ವಸ್ತು, ಮುಖ್ಯ ಪಾತ್ರಧಾರಿಗಳ ಅಭಿನಯ, ರಂಗ ವಿನ್ಯಾಸ, ವಸ್ತ್ರ ವಿನ್ಯಾಸಗಳಿಂದ ಗಮನ ಸೆಳೆಯಿತು.

Advertisement

ನಗರದ ಶಾಂತಲಾ ಕಲಾವಿದರು ತಂಡ ಈ ವರ್ಷ 50ನೇ ವರ್ಷ ಆಚರಿಸಿಕೊಳ್ಳುತ್ತಿದ್ದು, ಈ ಸುವರ್ಣ ಮಹೋತ್ಸವದ ಅಂಗವಾಗಿ ಪ್ರತಿ ತಿಂಗಳೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದೆ. ಆಗಸ್ಟ್ ತಿಂಗಳ ಭಾಗವಾಗಿ ಅಶ್ವಘೋಷ ನಾಟಕ ಪ್ರದರ್ಶಿಸಿತು.

ನಾಟಕವನ್ನು ಅಧ್ಯಾಪಕ ಬಿ.ಎಸ್. ವಿನಯ್ ರಚಿಸಿದ್ದು, ಶಾಂತಲಾ ಕಲಾವಿದರು ತಂಡದ ಚಿತ್ರಾ ವೆಂಕಟರಾಜು ನಿರ್ದೇಶನ ಮಾಡಿದ್ದಾರೆ. ಅಶ್ವಘೋಷ ಕ್ರಿ.ಶ.1 ನೇ ಶತಮಾನದಲ್ಲಿ ಜೀವಿಸಿದ್ದ ಮಹಾಕವಿ, ನಾಟಕಕಾರ, ದಾರ್ಶನಿಕನಾಗಿದ್ದು, ಈತ ರಚಿಸಿದ ಬುದ್ಧಚರಿತ ಕೃತಿಯು ಬುದ್ಧನ ಕುರಿತು ರಚಿತವಾದ ಮೊದಲ ಪುಸ್ತಕ. ಇದಲ್ಲದೆ ಸಾರೀಪುತ್ರ ಪ್ರಕರಣ, ಊರ್ವಶೀ ವಿಯೋಗ ಮೊದಲಾದ ಹಲವು ಕೃತಿಗಳು ಅಶ್ವಘೋಷನಿಂದ ರಚಿತವಾಗಿವೆ.

ಇಂತಹ ವ್ಯಕ್ತಿಯ ಬದುಕಿನ ಕುರಿತು ಅಧ್ಯಾಪಕ ಬಿ.ಎಸ್. ವಿನಯ್ ರಚಿಸಿದ ನಾಟಕ ಅಶ್ವಘೋಷ.  ಕವಿಯಾಗಿ ಹೆಸರುಪಡೆದಿದ್ದ ಅಶ್ವಘೋಷನಿಗೆ ಚಂದ್ರಪ್ರಭಾ ಎಂಬ ಪ್ರೇಯಸಿ ಇದ್ದು, ಇಬ್ಬರ ಧರ್ಮವೂ ಬೇರೆ ಬೇರೆ. ಇಬ್ಬರ ಪ್ರೇಮಕ್ಕೆ ಮನೆಯವರಿಂದ ವಿರೋಧ. ಅಂದಿನ ಸಾಮಾಜಿಕ ಸಂದರ್ಭದಲ್ಲಿ ಬೇರೆ ಬೇರೆ ಧರ್ಮದ ಹೆಣ್ಣು ಗಂಡಿನ ಮದುವೆ ಎಂಬುದು ಅಸಾಧ್ಯ ಎಂಬ ಪರಿಸ್ಥಿತಿ. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅಮರ ಪ್ರೇಮಿಗಳಾದ ಅಶ್ವಘೋಷ ಮತ್ತು ಚಂದ್ರಪ್ರಭಾ ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ಏನು ನಿರ್ಧಾರ ಕೈಗೊಳ್ಳುತ್ತಾರೆ? ಅವರ ಪ್ರೇಮ ಸಫಲವಾಗುತ್ತದೋ? ವಿಫಲವಾಗುತ್ತದೋ?  ಎಂಬುದನ್ನು ಅತ್ಯಂತ ಕುತೂಹಲಕಾರಿಯಾಗಿ ನಾಟಕದಲ್ಲಿ ಹಿಡಿದಿಟ್ಟಿದ್ದಾರೆ ನಾಟಕಕಾರ ವಿನಯ್.

ಇದನ್ನು ರಂಗದ ಮೇಲೆ ಸಮರ್ಥವಾಗಿ ತಂದಿದ್ದಾರೆ ನಿರ್ದೇಶಕಿ ಚಿತ್ರಾ ವೆಂಕಟರಾಜು. ಇದು ನಾಟಕದ ಮೊದಲ ಪ್ರಯೋಗ. ಚಾಮರಾಜನಗರದಂಥ ಮೂರನೇ ಹಂತದ ಪಟ್ಟಣಗಳಲ್ಲಿ ಅಭಿನಯದ ತರಬೇತಿ ಇಲ್ಲದ ಹವ್ಯಾಸಿಗಳನ್ನು ಹುಡುಕಿ ಅವರಿಂದ ಅಭಿನಯ ಹೊರತೆಗೆಯುವುದು ಸಾಹಸದ ಕೆಲಸವೇ ಸರಿ. ಇದರಲ್ಲಿ ಚಿತ್ರಾ ಬಹುತೇಕ ಯಶಸ್ಸು ಗಳಿಸಿದ್ದಾರೆ. ಚಂದ್ರಪ್ರಭಾಳಾಗಿ ಚಿತ್ರಾ ಅಭಿನಯಸಿದ್ದು,  ನಟನೆಯಲ್ಲಿ ಪೂರ್ಣಾಂಕ ಗಳಿಸುತ್ತಾರೆ. ಅಶ್ವಘೋಷನಾಗಿ ಹರೀಶ್‌ಕುಮಾರ್ ಗಮನ ಸೆಳೆಯುತ್ತಾರೆ.

Advertisement

ನಾಟಕ ಸುಮಾರು 1 ಗಂಟೆ 40 ನಿಮಿಷಗಳ ಕಾಲ ಇದ್ದು, ಅಷ್ಟು ಹೊತ್ತು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಾಟಕ ಯಶಸ್ವಿಯಾಗುತ್ತದೆ. ಮಧ್ಯಂತರದ ನಂತರ ಬರುವ ಬೌದ್ಧ  ಧರ್ಮಗುರುಗಳ ಪ್ರಸಂಗ ಆಸಕ್ತಿಕರವಾಗಿದ್ದು ಎಂ. ಲಿಂಗಪ್ಪ ಬೌದ್ದ ಗುರುವಾಗಿ ಗಮನ ಸೆಳೆಯುತ್ತಾರೆ. ಬುದ್ಧ ಪ್ರತಿಪಾದಿಸಿದ ಅನಾತ್ಮವಾದ, ಧರ್ಮದ ವ್ಯಾಖ್ಯಾನ ಚಿಂತನೆಗೆ ಹಚ್ಚುತ್ತದೆ.

ನಾಟಕದ ಏಕತಾನತೆಯನ್ನು ಮರೆಸುವುದಕ್ಕಾಗಿ ಬದನೆಕಾಯಿ ಪ್ರಸಂಗದ ಮೂಲಕ ಆಹಾರ ಸ್ವಾತಂತ್ರ‍್ಯ ಇತ್ಯಾದಿ ಪ್ರಸ್ತುತ ಸನ್ನಿವೇಶಗಳನ್ನು ಅಂದಿನ ರಾಜಪ್ರಭುತ್ವಕ್ಕೆ ಸಮೀಕರಿಸಿ ನಡೆಯುವ ಪ್ರಸಂಗಗಳು ಹಾಸ್ಯಮಯವಾಗಿದ್ದು, ನೋಡುಗರನ್ನು ನಗಿಸುತ್ತವೆ. ಈ ಸನ್ನಿವೇಶಗಳಲ್ಲಿ ಅಬ್ರಹಾಂ ಡಿಸಿಲ್ವ, ನಾಗೇಶು, ಗೌತಮ್ ರಾಜ್ ಪ್ರೇಕ್ಷಕರನ್ನು ರಂಜಿಸುತ್ತಾರೆ.

ಇದು ನಾಟಕದ ಮೊದಲ ಪ್ರಯೋಗ. ಕೆಲವು ನಟರು ಹವ್ಯಾಸಿಗಳಾಗಿರುವುದರಿಂದ ಅಭಿನಯದ ವಿಷಯದಲ್ಲಿ ಅರೆಕೊರೆಗಳಿದ್ದರೂ, ಅದನ್ನು ನಾಟಕದ ವಿನ್ಯಾಸ, ಬೆಳಕು, ರಂಗಸಜ್ಜಿಕೆ, ಸಂಗೀತ, ವೇಷಭೂಷಣ ಮರೆಸುತ್ತದೆ. ಭಿನ್ನಷಡ್ಜ ಸಂಗೀತ, ವಿ. ಡಿ.  ಮಧುಸೂದನ್ ಬೆಳಕು, ಸೃಷ್ಟಿ ಹ್ಯಾಂಡ್‌ಲೂಮ್ಸ್ ವಸ್ತ್ರವಿನ್ಯಾಸ,  ಮಂಜುನಾಥ್ ಕಾಚಕ್ಕಿ ಪ್ರಸಾಧನ ನಾಟಕದ ರಂಗು ಹೆಚ್ಚಿಸಲು ಸಹಕಾರಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next