ಇಪ್ಪತ್ತನೇ ಶತಮಾನದ ಮಹತ್ವದ ಭಾರತೀಯರಲ್ಲಿ ಖ್ಯಾತ ಶಿಕ್ಷಣತಜ್ಞ ಅಶುತೋಷ್ ಮುಖ್ಯೋಪಾಧ್ಯಾ ಯರೂ ಒಬ್ಬರು. ಗಣಿತಜ್ಞರಾಗಿದ್ದ ಅವರು ಮುಂದೆ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಯೂ ಆದರು. ಅಶುತೋಷರು, ಕೋಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಐದು ಸಲ ವೈಸ್ ಛಾನ್ಸಲರ್ ಆಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದವರು.
ಮಾತ್ರವಲ್ಲ, ಭಾರತದಲ್ಲಿ ಮೊದಲ ಬಾರಿಗೆ ಗಣಿತ ಮತ್ತು ಭೌತಶಾಸ್ತ್ರ ಎರಡರಲ್ಲೂ ಒಟ್ಟಿಗೇ ಸ್ನಾತಕೋತ್ತರ ಪದವಿ ಸಂಪಾದಿಸಿದ ಕೀರ್ತಿಯೂ ಅವರದ್ದೇ! ಅವರು ಕೋಲ್ಕತ್ತಾ ಗಣಿತ ಸಂಘದ ಸ್ಥಾಪಕಾಧ್ಯಕ್ಷರು ಕೂಡ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಹತ್ತಾರು ಶಿಕ್ಷಣಸಂಸ್ಥೆಗಳನ್ನು ಕಟ್ಟಿಬೆಳೆಸಿದ ಕೀರ್ತಿ ಅಶುತೋಷರದ್ದು. ಅಷ್ಟೊಂದು ಎತ್ತರದ ಸ್ಥಾನದಲ್ಲಿದ್ದರೂ ಅವರದ್ದು ಸಾದಾ ಸೀದಾ ಉಡುಪು. ಉದ್ದ ಚುಂಗಿನ ಕಚ್ಚೆ, ಖಾದಿ ಅಂಗಿ, ಕೋಟು, ಮೇಲೊಂದು ಹತ್ತಿಯಉತ್ತರೀಯ, ಕಾಲಿಗೆ ಹವಾಯಿ ಸ್ಲಿಪ್ಪರಿನಂಥ ಸಾಧಾರಣ ಚಪ್ಪಲಿ. ಅವರನ್ನು ಮೊದಲ ಬಾರಿಗೆ ಕಂಡವರ್ಯಾರೂ, ಆ ಬಟ್ಟೆಬರೆಯನ್ನೂ ಅದರ ಸರಳತೆಯನ್ನೂ ನೋಡಿ, ಅವರ ವ್ಯಕ್ತಿತ್ವದ ಔನ್ನತ್ಯವನ್ನು ಹೇಳಲು ಸಾಧ್ಯವೇ ಇರಲಿಲ್ಲ. ಆದರೆ ಮುಖದ ತೇಜಸ್ಸನ್ನು ಕಂಡವರು ಮಾತ್ರ ಅಶುತೋಷರ ಕುರಿತು ಅಪರಿಮಿತ ಗೌರವ ಭಾವನೆ ತಾಳುತ್ತಿದ್ದರು.
ಭಾರತೀಯರನ್ನು ಪರಂಗಿಗಳು ಕಾಲ ಕಸದಂತೆ ಕಾಣುತ್ತಿದ್ದ ಕಾಲ ಅದು. ರೈಲುಗಳಲ್ಲಿ ಮೊದಲ ದರ್ಜೆಯ ಬೋಗಿಗಳಲ್ಲಿ ಭಾರತೀಯರಿಗೆ ಪ್ರವೇಶವಿರಲಿಲ್ಲ. ಆದರೆ ಅಶುತೋಷರು ಹಲವು ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಮಹತ್ವದ ವ್ಯಕ್ತಿಯಾದ್ದರಿಂದ, ಅವರಿಗೆ ಮೊದಲ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುವ ಅವಕಾಶವಿತ್ತು. ಅಲ್ಲದೆ ಅಶುತೋಷರು ಕೂಡ, ತನ್ನ ಹಕ್ಕನ್ನು ಅಧಿಕಾರಯುತವಾಗಿಯೇ ಚಲಾಯಿಸಬೇಕೆಂಬ ಧಿಮಾಕಿನವರು.
ಅದೊಂದು ಸಲ, ಅವರು ಕೂತಿದ್ದ ಬೋಗಿಯಲ್ಲಿ ಪರಂಗಿ ಅಧಿಕಾರಿಯೊಬ್ಬನಿದ್ದ. ಅವನಿಗೆ ಇವರನ್ನು ಕಂಡರೆ ಮೈಯೆಲ್ಲ ಉರಿ. ಅಸಡ್ಡೆ. ಈ ಬೂದುಬಣ್ಣದ ಕಂಟ್ರಿಮ್ಯಾನ್ ಯಾತಕ್ಕೆ ಈ ಬೋಗಿ ಹತ್ತಿದ್ದಾನೋ ಎಂಬ ತಾತ್ಸಾರ. ತನ್ನ ಅಸಮಾಧಾನವನ್ನು ಅವನು ಕಣ್ಣಿಗೆ ಕಾಣಿಸುವಂತೆಯೇ ಆಗೀಗ ಪ್ರದರ್ಶಿಸುತ್ತಿದ್ದ. ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಅಶುತೋಷರು ತನ್ನ ಸೀಟಿನಲ್ಲಿ ಆರಾಮಾಗಿ ಮೈಚಾಚಿ ನಿದ್ದೆ ಹೊಡೆದರು! ಎದ್ದು ನೋಡಿದಾಗ, ಅವರಿಗೆ ತನ್ನ ಚಪ್ಪಲಿ ಕಾಣೆಯಾದದ್ದು ಗಮನಕ್ಕೆ ಬಂತು. ಏನಾಗಿರಬಹುದು ಎಂಬುದನ್ನು ಊಹಿಸಲಾರ ದಷ್ಟು ಪೆದ್ದರೇನಲ್ಲ ಅವರು. ಸರಿ, ಸಂದರ್ಭ ಬರಲಿ ಎಂದು ಕಾದರು. ತುಸು ಹೊತ್ತಿನ ನಂತರ, ಆ ಬ್ರಿಟಿಷ್ ಅಧಿಕಾರಿ ನಿದ್ದೆಗೆ ಜಾರಿದ. ಆಗ ಅಶುತೋಷರು ಎದ್ದು, ಆತ ಮೊಳೆಗೆ ನೇತುಹಾಕಿದ್ದ ಕೋಟನ್ನು ತೆಗೆದು, ಕಿಟಕಿಯ ಹೊರಗೆ ಎಸೆದುಬಿಟ್ಟರು.
ನಿದ್ದೆಯಿಂದೆದ್ದ ಬಳಿಕ ಅಧಿಕಾರಿ ತನ್ನ ಕೋಟಿಗಾಗಿ ಎಲ್ಲೆಲ್ಲೂ ಹುಡುಕಾಡಿದ. ಕೊನೆಗೆ ಅಶುತೋ ಷರಲ್ಲಿ ಕೋಟು ಎಲ್ಲಿದೆ? ಎಂದು ಕೇಳಿದ. ಅಶುತೋಷರು ಯಾವ ಅಳುಕೂ ಇಲ್ಲದೆ ತಣ್ಣಗೆ ಹೇಳಿದರು: ಅದು ಬಹುಶಃ ನನ್ನ ಚಪ್ಪಲಿಯನ್ನು ಹುಡುಕಿಕೊಂಡು ಹೋಗಿರಬೇಕು!
-ರೋಹಿತ್ ಚಕ್ರತೀರ್ಥ