ಮೊಹಾಲಿ: ಇಲ್ಲಿ ಭಾನುವಾರ ನಡೆದ ರೋಚಕ ಜಿದ್ದಾಜಿದ್ದಿನ ಏಕದಿನ ಪಂದ್ಯದಲ್ಲಿ ಪ್ರವಾಸೀ ಆಸ್ಟ್ರೇಲಿಯಾ ಭಾರತ ತಂಡ ನೀಡಿದ್ದ ಬರೋಬ್ಬರಿ 359 ರನ್‌ಗಳನ್ನು ಬೆನ್ನಟ್ಟಿ ಭರ್ಜರಿ ಜಯ ಗಳಿಸಿ 5 ಪಂದ್ಯಗಳ ಸರಣಿಯನ್ನು 2-2 ರಿಂದ ಸಮ ಬಲ ಮಾಡುವ ಮೂಲಕ ಫೈನಲ್ ಕುತೂಹಲ ಉಳಿಸಿದೆ. ಸೋಲಿನ ಸುಳಿಗೆ ಸಿಕ್ಕಿದ್ದ ಆಸೀಸ್ ತಂಡವನ್ನು ಆಸ್ಟನ್ ಟರ್ನರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವು ತಂದಿಟ್ಟರು.
ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ ಶಿಖರ್ ಧವನ್ ಅವರ ಭರ್ಜರಿ 143 ರನ್,ರೋಹಿತ್ ಶರ್ಮಾ ಅವರ 95 ರನ್‌ಗಳ ಮಹತ್ವದ ಕೊಡುಗೆಯಿಂದಾಗಿ 358 ರನ್‌ಗಳಿಸಿತ್ತು.
359 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್ 3 ರನ್‌ಗೆ ಆರಂಭಿಕ ಆರೋನ್ ಫಿಂಚ್ ಅವರನ್ನು ಕಳೆದುಕೊಂಡು ಆರಂಭಿಕ ಅಘಾತಕ್ಕೆ ಸಿಲುಕಿತು, ಬಳಿಕ ಉಸ್ಮಾನ್ ಖ್ವಾಜಾ ತಂಡಕ್ಕೆ ಆಧಾರವಾದರು. ಅವರು 91 ರನ್‌ಗಳಿಸಿ ಔಟಾದರು. ಶಾನ್ ಮಾರ್ಶ್ 6 ಕ್ಕೆ ಔಟಾದರು. ಪೀಟರ್ ಹ್ಯಾಂಡ್ಸ್‌ಕೂಂಬ್ ಅವರು ಭರ್ಜರಿ ಶತಕ ಸಿಡಿಸಿ ಗೆಲುವಿನತ್ತ ಕೊಂಡೊಯ್ದರು. 117 ರನ್‌ಗಳಿಸಿ ಅವರು ಔಟಾದರು. ಮ್ಯಾಕ್ಸ್‌ವೆಲ್ 23 ರನ್‌ಗಳಿಸಿ ಔಟಾದರು.
ಎಸೆತಗಳಿಂದ ರನ್ ಅಂತರ ಹೆಚ್ಚಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಆಪತ್‌ಬಾಂಧವನಾಗಿ ಬಂದ ಆಸ್ಟನ್ ಟರ್ನರ್ 43 ಎಸೆತಗಳಲ್ಲಿ 84 ರನ್ ಸಿಡಿಸಿ ಅಜೇಯರಾಗಿ ಉಳಿದರು. ಅವರು 6 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಸಿಡಿಸಿದರು.
ಅಲೆಕ್ಸ್ ಕ್ರೇ 21 ರನ್ ಕೊಡುಗೆ ಸಲ್ಲಿಸಿ ಕೊನೆಯಲ್ಲಿ ನಿರ್ಗಮಿಸಿದರು. 47.5 ಓವರ್‌ಗಳಲ್ಲೇ 6 ವಿಕೆಟ್ ನಷ್ಟಕ್ಕೆ 359 ರನ್‌ಗಳಿಸಿದ ಆಸೀಸ್ ಗೆಲುವಿನ ಕೇಕೆ ಹಾಕಿತು.