ಚಾಮರಾಜನಗರ: ಬೆಂಗಳೂರಿನ ಎಚ್‌ಎಎಲ್ ನಲ್ಲಿರುವ ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿ ಫ್ಲೈಟ್ ಟೆಸ್ಟ್ ಇಂಜಿನಿಯರ್ ಪದವಿ ಪೂರೈಸುವ ಮೂಲಕ ಜಿಲ್ಲೆಯ ಕೊಳ್ಳೇಗಾಲ ಮೂಲದ ಆಶ್ರಿತಾ ವಿ ಒಲೇಟಿ ಭಾರತೀಯ ವಾಯುಪಡೆಯ ಮೊತ್ತಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ವ್ಕಾಡ್ರನ್ ಲೀಡರ್ ಆಶ್ರಿತಾ ವಿ ಒಲೇಟಿ ಪ್ರತಿಷ್ಠಿತ ಏರ್‌ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲಿನಲ್ಲಿ ಪದವೀಧರೆ. ಇಡೀ ವಿಶ್ವದಲ್ಲಿ ಏಳು ವಿವಿಗಳು ಮಾತ್ರ ಇಂಥ ಶಾಲೆ ಹೊಂದಿವೆ. ಈ ಶಾಲೆಯ 275 ಮಂದಿ ಮಾತ್ರ ಈ ಕೋರ್ಸ್ ಸಂಪೂರ್ಣಗೊಳಿಸಿ ಪದವಿ ಪಡೆದಿದ್ದಾರೆ. ಇವರಲ್ಲಿ ಆಶ್ರಿತಾ ಒಲೆಟಿ, ಈ ಕೋರ್ಸ್ ನಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ವಾಯುಪಡೆ ಅಧಿಕಾರಿಯಾಗಿದ್ದಾರೆ.
ಈ ಹುದ್ದೆಗೆ ಉತ್ತರ ಭಾರತದ ಯುವ ಪುರುಷ ವಾಯುಸೇನೆ ಪೈಲಟ್‌ಗಳೇ ಆಯ್ಕೆಯಾಗುತ್ತಾರೆ. ದಕ್ಷಿಣ ಭಾರತದ ಮಂದಿ ತೀರಾ ಕಡಿಮೆ. ಮಹಿಳೆಯರಂತೂ ಇರಲೇ ಇಲ್ಲ.
ಇದನ್ನೂ ಓದಿ :ರಾಜ್ಯದಲ್ಲಿಂದು 25979 ಕೋವಿಡ್ ಪ್ರಕರಣ ಪತ್ತೆ : 626 ಜನರ ಸಾವು
Related Articles
ಏರೋಸ್ಪೇಸ್ ಇಂಜಿನಿಯರ್ ಆಗಿರುವ ಆಶ್ರಿತಾ, 2014ರಲ್ಲಿ ವಾಯುಪಡೆಯ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗಿದ್ದರು.
ಅತಿವೇಗವಾಗಿ ಸ್ಕ್ವಾಡ್ರನ್ ಲೀಡರ್ ಹುದ್ದೆ ಸಹ ಗಳಿಸಿ, ಕಠಿಣ ಪರೀಕ್ಷೆಗಳನ್ನು ಪಾಸು ಮಾಡಿ ಟೆಸ್ಟ್ ಪೈಲಟ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಏರ್‌ಕ್ರಾಫ್‌ಟ್ ಆಂಡ್ ಸಿಸ್ಟಮ್‌ಸ್ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಆಶ್ರಿತಾ ತಂದೆ ಓ.ವಿ. ವೆಂಕಟೇಶಬಾಬು ಜಿಲ್ಲೆಯ ಕೊಳ್ಳೇಗಾಲದಲ್ಲಿ ಆಭರಣ ವ್ಯಾಪಾರಿಯಾಗಿದ್ದಾರೆ. ತಾಯಿ ಓ.ವಿ. ವಾಣಿ ಗೃಹಿಣಿಯಾಗಿದ್ದಾರೆ.
ಟೆಸ್ಟ್ ಪೈಲಟ್ ಎಂದರೇನು?
ಟೆಸ್ಟ್ ಪೈಲಟ್ ಎಂದರೆ, ಹೊಸ ವಿಮಾನ, ಹೆಲಿಕಾಪ್ಟರ್‌ಗಳು ಹಾರಾಟಕ್ಕೆ ಯೋಗ್ಯವೇ ಎಂದು ನಿರ್ಧರಿಸುವುದು. ಯಾವುದಾದರೂ ಹಳೆಯ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ರಿಪೇರಿ ಅಥವಾ ಕಾಲಕಾಲಕ್ಕೆ ನಿರ್ವಹಣೆಗೊಳಪಟ್ಟಾಗ, ಆ ಕಾರ್ಯ ಮುಗಿದ ನಂತರ, ಅಂತಹ ಯುದ್ಧ ಅಥವಾ ಸರಕು ವಿಮಾನ ಹಾರಾಡಲು ಯೋಗ್ಯವೇ ಎಂಬುದನ್ನು ಈ ಟೆಸ್ಟ್ ಪೈಲಟ್‌ಗಳು ವಿಮಾನವನ್ನು ಹಾರಿಸಿ, ದೃಢೀಕರಣ ನೀಡಬೇಕು. ಇಲ್ಲವಾದಲ್ಲಿ ಆ ವಿಮಾನ ಪ್ರಮಾಣಪತ್ರ ಪಡೆಯಲು ವಿಫಲವಾದಲ್ಲಿ ಮತ್ತೆ ಅಂತಹ ಟೆಸ್ಟ್ ಪೈಲಟ್ ನೀಡುವ ವರದಿಯನುಸಾರ ಮತ್ತೆ ಪರಿಶೀಲಿಸಿ ದುರಸ್ತಿಗೊಳಿಸಿ ಮತ್ತೆ ಟೆಸ್ಟ್ ಪೈಲಟ್ ನಿಂದ ಪರೀಕ್ಷೆಗೊಳಪಡಬೇಕು.
ಯಾವುದೇ ಹೊಸ ವಿಮಾನ ಖರೀದಿಯಾದಾಗಲೂ ಅವುಗಳು ಟೆಸ್ಟ್ ಪೈಲಟ್ ಗಳಿಂದ ಪರೀಕ್ಷಾ ಚಾಲನೆ ಆಗಲೇಬೇಕು ಹಾಗೂ ದೃಢೀಕರಣ ಆಗಲೇಬೇಕು.
ಇಂತಹ ಹುದ್ದೆಗೆ ನೂರಾರು ಪೈಲಟ್ ಗಳಲ್ಲಿ ಅವರ ವಿಮಾನ ಹಾರಾಟ ನಡೆಸಿ, ನಾಲ್ಕಾರು ವರ್ಷವಾದ ನಂತರ ಅದಕ್ಕೇ ಆದ ವಿಶೇಷ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನವಾದ ನಂತರ ಆಗುತ್ತದೆ. ಅಲ್ಲಿ ಶಿಫಾರಸ್ಸು ಜಾತಿ, ಹಣ ಇತ್ಯಾದಿಗಳಿಗೆ ಅವಕಾಶವೇ ಇಲ್ಲ.
-ಜಯವಿಭವ ಸ್ವಾಮಿ, ಸೆಸ್‌ಕ್ ಎಂಡಿ. ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ.