Advertisement

ಅಶೋಕ ರೈಲ್ವೆ ಗೇಟ್‌ ಸಮಸ್ಯೆಗೆ ಕೊನೆಗೂ ಮುಕ್ತಿ

04:42 PM Aug 22, 2022 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿಯಾಗುತ್ತಿರುವ ದಾವಣಗೆರೆಯಲ್ಲಿ ದಶಕಗಳ ಕಾಲ ಸಮಸ್ಯೆಯಾಗಿದ್ದ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವ ಕಾಲ ಕೂಡಿ ಬಂದಿದೆ.

Advertisement

ಹೌದು, ನಾಲ್ಕೈದು ದಶಕಗಳಿಂದ ಬಗೆಹರಿಯದ ಕಗ್ಗಂಟ್ಟಿನಂತಾಗಿದ್ದ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ ಸಮಸ್ಯೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ನಡೆದ ಹಲವಾರು ಪ್ರಯತ್ನ, ಹೋರಾಟಕ್ಕೆ ಫಲ ದೊರೆತಿದೆ. ಇನ್ನು ಕೆಲವೇ ದಿನಗಳಲ್ಲಿ ಅಶೋಕ ಚಿತ್ರಮಂದಿರದ ಬಳಿ ಎರಡು ರೈಲ್ವೆ ಕೆಳ ಸೇತುವೆ(ವೆಂಟ್‌) ನಿರ್ಮಾಣ ಆಗಲಿವೆ. ಸಾರ್ವಜನಿಕರು, ವಾಹನಗಳ ಸವಾರರು ಈವರೆಗೆ ಅನುಭವಿಸುತ್ತಿರುವ ಸಂಚಾರ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಬಹು ವರ್ಷಗಳ ಬೇಡಿಕೆ ಈಡೇರಿದಂತಾಗಲಿದೆ.

ಏನಿದು ಸಮಸ್ಯೆ?: ರೈಲುಗಳು ಸಂಚರಿಸುವ ಸಂದರ್ಭದಲ್ಲಿ ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್‌ ಹಾಕಿದಾಗ ಅನೇಕ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗುತ್ತಿತ್ತು. ಅನೇಕ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳು ಸಹ ಸಿಕ್ಕಿಹಾಕಿಕೊಂಡಿದ್ದ ನಿರ್ದಶನಗಳಿವೆ. ದಿನಕ್ಕೆ 30-35 ರೈಲುಗಳು ಬಂದ
ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸಂಚಾರದ ದಟ್ಟಣೆ ಎಲ್ಲ ರೀತಿಯ ಸಮಸ್ಯೆಗೆ ಮೂಲವಾಗಿತ್ತು. ಪ್ರತಿ ಬಾರಿಯೂ ವಾಹನ ಸವಾರರು, ಸಾರ್ವಜನಿಕರು ಹೈರಾಣಾಗುವಂತಾಗುತ್ತಿತ್ತು.

ಹೋರಾಟದ ಇತಿಹಾಸ: ಅಶೋಕ ಚಿತ್ರ ಮಂದಿರ ರೈಲ್ವೆ ಗೇಟ್‌ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯಲ್ಲಿ ಜನಪ್ರತಿನಿಧಿಗಳಿಗೆ ಸಲ್ಲಿಸಿದ ಮನವಿ, ನಡೆದ ಹೋರಾಟಕ್ಕೆ ದಶಕಗಳ ಇತಿಹಾಸವೇ ಇದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಆದಿಯಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿ, ಜಿಲ್ಲಾಡಳಿತಕ್ಕೆ ಪತ್ರ ಸಹ ಬರೆದಿದ್ದರು.

ರೈಲ್ವೆ ಇಲಾಖೆ ಹೊಣೆ ಹೊತ್ತಿದ್ದ ಕೆ.ಎಚ್‌. ಮುನಿಯಪ್ಪ, ಬಸವನಗೌಡ ಯತ್ನಾಳ್‌, ಸುರೇಶ್‌ ಅಂಗಡಿ ಖುದ್ದು ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ಗೆ ಭೇಟಿ ನೀಡಿ ಸಮಸ್ಯೆ ಅರಿತು ಬಗೆಹರಿಸುವ ಭರವಸೆ ನೀಡಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಅಶೋಕ ಚಿತ್ರ ಮಂದಿರ ರೈಲ್ವೆ ಗೇಟ್‌ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಹ ಹೋರಾಟ ನಡೆಸಿದ್ದವು. ಕನ್ನಡ ಪರ ಸಂಘಟನೆಗಳು ಹೋರಾಟದಿಂದ ಹೊರತಾಗಿರಲಿಲ್ಲ.

Advertisement

ಅಶೋಕ ಚಿತ್ರ ಮಂದಿರ ರೈಲ್ವೆ ಗೇಟ್‌ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾಸ್ಟರ್‌ ಪ್ಲಾನ್‌ ರೂಪಿಸಿದ್ದರು. ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌ನಿಂದ ರೈಲ್ವೆ ಇಲಾಖೆಗೆ 22 ಲಕ್ಷ ರೂ. ಅನುದಾನ ನೀಡಲಾಗಿತ್ತು. ಕೇಂದ್ರದಲ್ಲಿ ರೈಲ್ವೆ ಇಲಾಖೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ ಅವರು ಬಜೆಟ್‌ನಲ್ಲಿ 35 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರು. ಇಷ್ಟೆಲ್ಲ ಇತಿಹಾಸ ಹೊಂದಿರುವ ಸಮಸ್ಯೆ ಶಾಶ್ವತವಾಗಿ
ಇತಿಹಾಸದ ಪುಟ ಸೇರುವ ಮುಹೂರ್ತ ಕೂಡಿ ಬಂದಿದೆ.

ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್‌ ಹತ್ತಿರ ಲಿಮಿಟೆಡ್‌ ಹೈಟ್‌ ಸಬ್‌ ವೇ ನಿರ್ಮಾಣ, ಉಳಿದಂತೆ ಪುಷ್ಪಾಂಜಲಿ ಚಿತ್ರಮಂದಿರದ ಎದುರು ಎರಡು ವೆಂಟ್‌ಗಳುಳ್ಳ ಕೆಳ ಸೇತುವೆ ಹಾಗೂ ರೈಲ್ವೆ ಹಳಿಗೆ ಸಮಾನಾಂತರವಾಗಿ ಪರ್ಯಾಯ ರಸ್ತೆ ನಿರ್ಮಾಣ ಆಗಲಿದೆ. ಇದರಿಂದ ಹಳೆಯ ದಾವಣಗೆರೆ ಭಾಗಕ್ಕೆ ಹೋಗಿ ಬರುವ ಸಮಸ್ಯೆ ಬಗೆಹರಿಯಲಿದೆ.

ಈಗ ಈ ಎಲ್ಲ ರೀತಿಯ ಸಮಸ್ಯೆಗಳು ಬಗೆಹರಿಯಲಿವೆ. ನಿರ್ಮಾಣ ಕಾರ್ಯಕ್ಕಾಗಿ ಯಂತ್ರಗಳು ಬಂದು ನಿಂತಿವೆ. ಕೆಲ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪೊಲೀಸ್‌ ಇಲಾಖೆಗೆ ಮನವಿ ಸಹ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ವೆಂಟ್‌ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿದ್ದು, ಅಶೋಕ ಚಿತ್ರಮಂದಿರದ ರೈಲ್ವೆ
ಗೇಟ್‌ ಸಮಸ್ಯೆಯೂ ನೀಗಲಿದೆ.

ಬಹಳ ದಿನಗಳಿಂದಲೂ ದಾವಣಗೆರೆಯಲ್ಲಿ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ ಸಮಸ್ಯೆ ಬಹು ದೊಡ್ಡ ಸಮಸ್ಯೆ ಆಗಿಯೇ ಇತ್ತು. ಈಗ ಅದನ್ನು ಬಗೆಹರಿಸುವ ಕೆಲಸ ಪ್ರಾರಂಭವಾಗುತ್ತಿರುವುದು ಬಹಳ ಸಂತೋಷದ ವಿಷಯ. ಸಾರ್ವಜನಿಕರು, ವಾಹನ ಸವಾರರಿಗೆ ಅನುಕೂಲ ಆಗಲಿದೆ.
*ಎಂ.ಜಿ. ಶ್ರೀಕಾಂತ್‌, ಸಾಮಾಜಿಕ ಕಾರ್ಯಕರ್ತರು

*ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next