ನವದೆಹಲಿ:ಕಳೆದ ತಿಂಗಳು ಪಕ್ಷದಿಂದ ಅಮಾನತುಗೊಂಡಿದ್ದ ಕಾಂಗ್ರೆಸ್ ಮುಖಂಡ ಅಶೋಕ್ ತನ್ವರ್ ಹರ್ಯಣ ವಿಧಾನಸಭಾ ಚುನಾವಣೆ ನಡೆಯಲು ಎರಡು ವಾರ ಇರುವಾಗಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ಬರೆದಿರುವ ನಾಲ್ಕು ಪುಟಗಳ ರಾಜೀನಾಮೆ ಪತ್ರವನ್ನು ತನ್ವರ್ ತಮ್ಮ ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಶನಿವಾರ ಘೋಷಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವ ಬಿಕ್ಕಟ್ಟಿಗೆ ಸಿಲುಕಿದೆ. ಆದರೆ ಇದು ರಾಜಕೀಯ ವಿರೋಧಿಗಳಿಂದ ಅಲ್ಲ, ತನ್ನದೇ ಒಳಜಗಳದಿಂದ ಪಕ್ಷ ಪತನದ ಹಾದಿ ಹಿಡಿದಿದೆ ಎಂದು ತನ್ವರ್ ದೂರಿದ್ದಾರೆ. ಹಲವು ತಿಂಗಳ ಬಳಿಕ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನ ರಕ್ತದಲ್ಲಿದೆ. ನನ್ನ ಹೋರಾಟ ವೈಯಕ್ತಿಕವಾದುದಲ್ಲ, ಆದರೆ ದೇಶದ ಅತ್ಯಂತ ಹಳೆಯ ಪಕ್ಷವನ್ನು ನಾಶ ಮಾಡುತ್ತಿರುವ ವ್ಯವಸ್ಥೆ ವಿರುದ್ಧ ಎಂಬುದಾಗಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹರ್ಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಇನ್ನು ಎರಡು ವಾರಗಳ ಕಾಲ ಇರುವ ನಡುವೆಯೇ ಟಿಕೆಟ್ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದಾಗಿ ಬಹಿರಂಗವಾಗಿ ಆರೋಪಿಸಿದ್ದಾರೆ.
ಈ ಬಿಕ್ಕಟ್ಟಿಗೆ ಕಾರಣ ಏನು ಎಂಬುದು ಕಾಂಗ್ರೆಸ್ ಪಕ್ಷ ಮತ್ತು ಸಾರ್ವಜನಿಕರಿಗೂ ತಿಳಿದಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.