ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಹಲವು ವಿದ್ಯಮಾನಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ, ಕೆಲವರ ದೆಹಲಿ ಪಯಣದ ಸುದ್ದಿ ಪದೇ ಪದೇ ನಡೆಯುತ್ತಿದೆ, ಕೆಲವರು ತಾವೇ ಸಿಎಂ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಸಹಜವಾಗಿಯೇ ಸಿಎಂ ಯಡಿಯೂರಪ್ಪ ಅವರಿಗೆ ನೋವಾಗಿದಂತಿದೆ. ಹಾಗಾಗಿಯೇ ಇಂದು ಈ ಮಾತು ಹೇಳಿರಬಹುದು ಎಂದು ಸಚಿವ ಆರ್.ಅಶೋಕ್ ಹೇಳಿದರು.
ಸಿಎಂ ಯಡಿಯೂರಪ್ಪ ಅವರ ‘ರಾಜೀನಾಮೆ’ ಹೇಳಿಕೆಯ ಬಳಿಕ ಸಿಎಂ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಸಿಎಂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ, ಹಗಲು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳ ಸಿಎಂಗಳ ಮಾಡದ ಕೆಲಸವನ್ನು ಬಿಎಸ್ ವೈ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಪದೇ ಪದೇ ನಾಯಕತ್ವದ ಚರ್ಚೆ ನಡೆಯುತ್ತಿದೆ. ಇದರಿಂದ ನೋವಾಗಿ ಹೀಗೆ ಹೇಳಿರಬಹುದು ಎಂದು ಅಶೋಕ್ ಹೇಳಿದರು.
ಇದನ್ನೂ ಓದಿ:ಯಾವಾಗ ಕೇಳುತ್ತಾರೋ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಿಎಂ
ಈಗಾಗಲೇ ನಳಿನ್ ಕಟೀಲ್, ಪ್ರಹ್ಲಾದ್ ಜೋಶಿ, ಸಿ.ಟಿ.ರವಿ ಸೇರಿದಂತೆ ನಮ್ಮ ನಾಯಕರು ನಾಯಕತ್ವ ಬದಲಾವಣೆ ಇಲ್ಲಾ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಎಂದು ಬಿಂಬಿಸಲಾಗುವ ಯೋಗೇಶ್ವರ್ ಕೂಡ ಯಡಿಯೂರಪ್ಪ ನಮ್ಮ ನಾಯಕರು ಅಂತಾ ಹೇಳಿದ್ದಾರೆ. ನಾವೆಲ್ಲಾ ಸಿಎಂ ಜೊತೆ ಇದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ತಪ್ಪು ದಾರಿಗೆ ಎಳೆಯುವ ಕೆಲಸ ನಡೆಯುತ್ತಿದೆ. ಅದಕ್ಕೆ ಮೊದಲು ಬ್ರೇಕ್ ಹಾಕಬೇಕು ಎಂದು ಅಶೋಕ್ ಹೇಳಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಸಂದರ್ಭದಲ್ಲಿ ಜೊತೆಗಿದ್ದರು