ವಿಶ್ವದ ದಿಗ್ಗಜ ಕಂಪೆನಿಗಳಲ್ಲಿ ಭಾರತೀಯ ಪ್ರತಿಭಾ ಸಂಪನ್ನರೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ಆ ಹೆಸರಿಗೆ ಇನ್ನೊಬ್ಬ ಭಾರತೀಯನ ಹೆಸರು ಸೇರ್ಪಡೆಯಾಗಿದೆ. ಅಶೋಕ್ ಎಳ್ಳುಸ್ವಾಮಿ ಎಂಬ ಹೆಸರು ಈಗ ಭಾರಿ ಸುದ್ದಿಯಾಗಿದ್ದು ಯಾಕೆ ಎಂದು ನಾವು ತಿಳಿಯುವ ಬನ್ನಿ.
ಟೆಸ್ಲಾ ಕಂಪನಿ ಸ್ವಯಂಚಾಲಿತ ಕಾರುಗಳ ಉತ್ಪಾದನೆಗೆ ಮುಂದಾಗಿದ್ದು,ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಎಲನ್ ಮಸ್ಕ್ ಅವರು ಅಶೋಕ್ ಎಳ್ಳುಸ್ವಾಮಿ ಅವರನ್ನು ಸ್ವಯಂಚಾಲಿತ ಪೈಲಟ್ ತಂಡದ ಮೊದಲ ಸದಸ್ಯರನ್ನಾಗಿ ಆಯ್ಕೆ ಮಾಡಿ ಭಾರತೀಯ ಪ್ರತಿಭೆಗೆ ಮನ್ನಣೆ ನೀಡಿದ್ದಾರೆ.
ಟೆಸ್ಲಾ ಸಂಸ್ಥೆಯಲ್ಲಿ ರೋಬೋಟಿಕ್ ಎಂಜಿನಿಯರ್ ಆಗಿರುವ ಅಶೋಕ್ ಎಳ್ಳುಸ್ವಾಮಿ ಯೋಜನೆ, ನಿಯಂತ್ರಣದ ಮೂಲಕ ಗಣಕ ಯಂತ್ರ ದೃಷ್ಟಿ ಹಾಗೂ ಗ್ರಹಿಕೆಯ ಅನುಭವ ಹೊಂದಿದ್ದಾರೆ. ೮ ವರ್ಷದ ಹಿಂದೆ ಅಶೋಕ್ ಅವರು ಕಂಪನಿಗೆ ಆಟೋ ಪೈಲಟ್ ವಿಭಾಗದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇರ್ಪಡೆಯಾಗಿದ್ದರು.
ಅಶೋಕ್ ಎಳ್ಳುಸ್ವಾಮಿ ಅವರು ಎಲೆಕ್ಟ್ರಿಕ್ ಸ್ವಯಂಚಾಲಿತ ಕಾರುಗಳ ಉತ್ಪಾದನಾ ತಂಡದ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಎಲನ್ ಮಸ್ಕ್ ಟ್ವೀಟ್ ಮಾಡಿದ್ದು, ಟೆಸ್ಲಾ ಆಟೋಪೈಲಟ್ ತಂಡವನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿ, ನೇಮಕಗೊಂಡ ಮೊದಲ ವ್ಯಕ್ತಿ ಅಶೋಕ್! ಎಂದು ಬರೆದಿದ್ದಾರೆ.
ಅಮೆರಿಕದ ಕಾರ್ನೆಜಿ ಮೆಲ್ಲೋನ್ ವಿವಿಯಲ್ಲಿ ರೋಬೋಟಿಕ್ ಅಭಿವೃದ್ಧಿ ಕುರಿತು ಅಶೋಕ್ ಹೆಚ್ಚಿನ ಅಧ್ಯಯನವನ್ನೂ ನಡೆಸಿದ್ದಾರೆ. ಟೆಸ್ಲಾ ಕಂಪನಿ ಸೇರುವುದಕ್ಕೂ ಮುನ್ನ ವೋಕ್ಸ್‌ವ್ಯಾಗನ್ ವ್ಯಾಬ್ಕೊ ವೆಹಿಕಲ್ ಕಂಟ್ರೋಲ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದರು.