Advertisement

ಎಲ್‌ಇಡಿ ವಾಹನಗಳಿಗೆ ಶೀಘ್ರ ಅನುಮತಿ ಕೋರಿದ ಅಶೋಕ್‌

12:02 PM Mar 31, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಎಲ್‌ಇಡಿ ವಾಹನಗಳಿಗೆ ತ್ವರಿತ ಅನುಮತಿ ನೀಡಬೇಕು ಹಾಗೂ ಚುನಾವಣಾ ಸಂಬಂಧ ಅನುಮತಿಗಳಿಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

Advertisement

ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರನ್ನು ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಅಶೋಕ್‌, ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿರುವುದರಿಂದ ಬಿಜೆಪಿ ಚುನಾವಣಾ ಪ್ರಚಾರವನ್ನು ಇನ್ನಷ್ಟು ಚುರುಕುಗೊಳಿಸುತ್ತಿದೆ. ಹಾಗಾಗಿ ಪಕ್ಷದ ಪ್ರಚಾರದ ಎಲ್‌ಇಡಿ ವಾಹನಗಳಿಗೆ ತಕ್ಷಣ ಅನುಮತಿ ನೀಡಬೇಕು. ಜತೆಗೆ ಚುನಾವಣಾ ಸಂಬಂಧಿತ ಅನುಮತಿ ನೀಡಿಕೆಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಸರಳಗೊಳಿಸಬೇಕು ಎಂದು ಕೋರಿದರು.

ಮುಖ್ಯ ಚುನಾವಣಾಧಿಕಾರಿಗಳ ಭೇಟಿ ಬಳಿಕ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ರಾಜಕೀಯ ಪಕ್ಷಗಳ ಸಭೆ, ರ್ಯಾಲಿ ನಡೆಸಲು ಅನುಮತಿ ನೀಡಿಕೆಗೆ ಆಯೋಗವು ಏಕ ಗವಾಕ್ಷಿ ವ್ಯವಸ್ಥೆ ಕಲ್ಪಿಸಿದ್ದು, ಅದನ್ನು ಇನ್ನಷ್ಟು ಸರಳಗೊಳಿಸಬೇಕು. ಇದರಿಂದ ತ್ವರಿತವಾಗಿ ಅನುಮತಿ ಪಡೆಯಲು ನೆರವಾಗಲಿದೆ. ಆ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ವಿದೇಶಿಗರ ಹೆಸರು ಸೇರಿಸಲಾಗಿದ್ದು, ಇದನ್ನು ಕೈಬಿಡಬೇಕು ಎಂದು ಕೋರಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ನಂತರವೂ ರಾಜ್ಯ ಸರ್ಕಾರದ ಯೋಜನೆಗಳಿಗೆ ಸಂಬಂಧಪಟ್ಟ ಜಾಹೀರಾತುಗಳು ಪ್ರದರ್ಶನಗೊಳ್ಳುತ್ತಿವೆ. ಇಂಥ ಜಾಹೀರಾತುಗಳನ್ನು ತೆರವುಗೊಳಿಸುವಂತೆಯೂ ಕೋರಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next