ಮುಂಬೈ: ನಾಲ್ಕು ಬಾರಿ ಮಿಸ್ಟರ್ ಇಂಡಿಯಾ ದೇಹದಾರ್ಢ್ಯ ಪ್ರಶಸ್ತಿ ಗೆದ್ದಿದ್ದ ಖ್ಯಾತ ಬಾಡಿ ಬಿಲ್ಡರ್ (ದೇಹದಾರ್ಢ್ಯ ಪಟು) ಆಶಿಶ್ ಸಖರ್ಕರ್ (43 ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ವಿಧಿವಶರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Yellapur: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ; ಇಬ್ಬರು ಗಂಭೀರ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಖರ್ಕರ್ ಅವರನ್ನು ಕಳೆದ ವಾರ ದಕ್ಷಿಣ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. 43 ವರ್ಷದ ಮುಂಬೈ ನಿವಾಸಿ ಆಶಿಶ್ ಬುಧವಾರ ರಾತ್ರಿ ನಿಧನ ಹೊಂದಿರುವುದಾಗಿ ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಶನ್ ಜನರಲ್ ಸೆಕ್ರೆಟರಿ ಹಿರಾಲ್ ಶೇಟ್ ಐಎಎನ್ ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಆಶಿಶ್ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 80 ಕೆಜಿ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಅಲ್ಲದೇ ಮಹಾರಾಷ್ಟ್ರ ಸರ್ಕಾರದ ಶಿವ ಛತ್ರಪತಿ ಪ್ರಶಸ್ತಿಗೂ ಭಾಜನರಾಗಿದ್ದರು.
ದೇಹದಾರ್ಢ್ಯ ಪಟು ಸಖರ್ಕರ್ ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ದೇಹದಾರ್ಢ್ಯ ಪಟು ಆಶಿಶ್ ಸಖರ್ಕರ್ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಂತಾಪ ವ್ಯಕ್ತಪಡಿಸಿದ್ದಾರೆ.