ತನ್ನ ಟೈಟಲ್ ಪೋಸ್ಟರ್, ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಮಂದಿಯ ಗಮನ ಸೆಳೆಯುತ್ತಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಹಿರಿಯ ನಾಗರಿಕರ ಬದುಕು, ಕನಸುಗಳ ಬಗೆಗಿನ ಕಥಾ ಹಂದರ ಹೊಂದಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದಲ್ಲಿ ರವಿಶಂಕರ್, ರಂಗಾಯಣ ರಘು, ತಬಲನಾಣಿ, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ “ಶಕ್ತಿ’, “ದಿಲ್‌ವಾಲ’, “ಕೃಷ್ಣ ರುಕ್ಕು’, “ರ್‍ಯಾಂಬೋ 2′ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಅನಿಲ್ ಕುಮಾರ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ
ಇನ್ನು ನಟಿ ಆಶಿಕಾ ರಂಗನಾಥ್ ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆಶಿಕಾ, ಕೈಯಲ್ಲಿ ಬಿಯರ್ ಬಾಟೆಲ್ ಹಿಡಿದುಕೊಂಡು ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಈಗಾಗಲೇ ಆಶಿಕಾ ನಿರ್ವಹಿಸಿರುವ ಗೆಟಪ್‌ನ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದು, ಚಿತ್ರತಂಡ ಮಾತ್ರ ಆಶಿಕಾ ರಂಗನಾಥ್ ಅವರ ಪಾತ್ರದ ಗುಟ್ಟನ್ನು ಹೆಚ್ಚೇನೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇಡೀ ಸಿನಿಮಾದಲ್ಲಿ ಆಶಿಕಾ ಸಂಪೂರ್ಣ ಪಾತ್ರ ಹೇಗಿರಲಿದೆ ಅನ್ನೋದು ಗೊತ್ತಾಗಬೇಕಾದರೆ ಆಶಿಕಾ ಅಭಿಮಾನಿಗಳು ಈ ವಾರಾಂತ್ಯದವರೆಗೂ ಕಾಯಬೇಕು.
“ಬಿಲ್ವ ಎಂಟರ್‌ಟೈನ್‌ಮೆಂಟ್’ ಬ್ಯಾನರ್‌ನಲ್ಲಿ ನವೀನ್ ಕುಮಾರ್ ಜಿ.ಆರ್ ಅವರು ನಿರ್ಮಿಸುತ್ತಿರುವ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶಿವಕುಮಾರ್ ಬಿ.ಕೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಕಾರ್ಯವಿದೆ.
ಸದ್ಯ “ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ವಾರ (ಮೇ. 27) ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದು, ಸಿನಿಮಾ ಹೇಗಿರಲಿದೆ ಎಂಬ ಸಿನಿಪ್ರಿಯರ ಕುತೂಹಲಕ್ಕೆ ಇದೇ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.