Advertisement
ಆ್ಯಶಸ್ ಸರಣಿಯ ತೃತೀಯ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ 4 ವಿಕೆಟಿಗೆ 305 ರನ್ ಮಾಡಿತ್ತು. ಆದರೆ ಶುಕ್ರವಾರ ದಿಢೀರ್ ಕುಸಿತಕ್ಕೆ ಸಿಲುಕಿ 98 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು. ಮಾಲನ್ 110ರಿಂದ ಹಾಗೂ ಬೇರ್‌ಸ್ಟೊ 75 ರನ್ನಿನಿಂದ ದಿನದಾಟ ಮುಂದುವರಿಸಿದರು. ಇವರ ಜತೆಯಾಟ 368ರ ತನಕ ಸಾಗಿತು. ಆಗ ಇಂಗ್ಲೆಂಡ್ 500ರ ಗಡಿ ದಾಟಿ ಮುನ್ನುಗ್ಗುವ ಸಾಧ್ಯತೆ ಬಲವಾಗಿತ್ತು. ಆದರೆ ಮಾಲನ್ ವಿಕೆಟ್ ಕಿತ್ತ ಲಿಯೋನ್ ಆಂಗ್ಲರ ಕುಸಿತಕ್ಕೆ ಚಾಲನೆ ನೀಡಿದರು. ಬರೀ 35 ರನ್ ಅಂತರದಲ್ಲಿ ಇಂಗ್ಲೆಂಡಿನ 6 ವಿಕೆಟ್‌ಗಳು ಹಾರಿಹೋದವು! ಬೇರ್‌ಸ್ಟೊ ಅವರ 4ನೇ ಶತಕ ಇಂಗ್ಲೆಂಡ್ ಸರದಿಯ ದ್ವಿತೀಯ ದಿನದ ಆಕರ್ಷಣೆಯಾಗಿತ್ತು. 75ರಲ್ಲಿದ್ದ ಅವರು 119ರ ತನಕ ಬ್ಯಾಟಿಂಗ್ ವಿಸ್ತರಿಸಿದರು. 215 ಎಸೆತಗಳ ಈ ಸೊಗಸಾದ ಆಟದ ವೇಳೆ 18 ಬೌಂಡರಿ ಸಿಡಿಯಲ್ಪಟ್ಟಿತು. ಇದು ಆಸ್ಟ್ರೇಲಿಯ ವಿರುದ್ಧ ಬೇರ್‌ಸ್ಟೊ ಬಾರಿಸಿದ ಮೊದಲ ಸೆಂಚುರಿ. 110 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾಲನ್ ಮತ್ತೆ 30 ರನ್ ಸೇರಿಸಿದರು. ಹೀಗೆ, ಅವರ ಮೊದಲ ಟೆಸ್ಟ್ ಶತಕ 140ರ ತನಕ ಬೆಳೆಯಿತು. 227 ಎಸೆತ ಎದುರಿಸಿದ ಮಾಲನ್ 19 ಬೌಂಡರಿ ಹಾಗೂ ಒಂದು ಸಿಕ್ಸರ್ ಹೊಡೆದರು. ಮಾಲನ್-ಬೇರ್‌ಸ್ಟೊ ಜೋಡಿಯಿಂದ 5ನೇ ವಿಕೆಟಿಗೆ 237 ರನ್ ಹರಿದು ಬಂತು.
ಜವಾಬು ನೀಡತೊಡಗಿದ ಆಸ್ಟ್ರೇಲಿಯ ಆರಂಭಿಕರಾದ ವಾರ್ನರ್ (22) ಮತ್ತು ಬಾನ್‌ಕ್ರಾಫ್ಟ್ (25) ಅವರನ್ನು 55 ರನ್ನಿಗೆ ಕಳೆದುಕೊಂಡಿತು. ಈ ಎರಡೂ ವಿಕೆಟ್ ಓವರ್ಟನ್ ಪಾಲಾದವು.
Related Articles
Advertisement
ಖ್ವಾಜಾ 50 ರನ್ ಮಾಡಿ ದಿನದಾಟದ ಕೊನೆಯ ಹಂತದಲ್ಲಿ ವೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. 123 ಎಸೆತಗಳ ಈ ಆಟದಲ್ಲಿ 8 ಬೌಂಡರಿ ಸೇರಿತ್ತು. ಸ್ಮಿತ್ 122 ಎಸೆತಗಳಿಂದ 92 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (14 ಬೌಂಡರಿ, 1 ಸಿಕ್ಸರ್). ಶನಿವಾರ 22ನೇ ಟೆಸ್ಟ್ ಶತಕ ಪೂರ್ತಿಗೊಳ್ಳುವುದು ಬಹುತೇಕ ಖಚಿತ. ಇವರೊಂದಿಗೆ 7 ರನ್ ಗಳಿಸಿರುವ ಶಾನ್ ಮಾರ್ಷ್ ಕ್ರೀಸಿನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-403 (ಮಾಲನ್ 140, ಬೇರ್‌ಸ್ಟೊ 119, ಸ್ಟೋನ್‌ಮ್ಯಾನ್ 56, ಸ್ಟಾರ್ಕ್ 91ಕ್ಕೆ 4, ಹ್ಯಾಝಲ್‌ವುಡ್ 92ಕ್ಕೆ 3, ಕಮಿನ್ಸ್ 84ಕ್ಕೆ 2). ಆಸ್ಟ್ರೇಲಿಯ-3 ವಿಕೆಟಿಗೆ 203 (ಸ್ಮಿತ್ ಬ್ಯಾಟಿಂಗ್ 92, ಖ್ವಾಜಾ 50, ಓವರ್ಟನ್ 46ಕ್ಕೆ 2).