Advertisement

ಆ್ಯಶಸ್‌: ಆಸೀಸ್‌ 10 ವಿಕೆಟ್‌ ಜಯಭೇರಿ

06:15 AM Nov 28, 2017 | |

ಬ್ರಿಸ್ಬೇನ್‌: ಪ್ರತಿಷ್ಠಿತ ಆ್ಯಶಸ್‌ ಸರಣಿಯನ್ನು ಆತಿಥೇಯ ಆಸ್ಟ್ರೇಲಿಯ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಆರಂಭಿಕರಾದ ಡೇವಿಡ್‌ ವಾರ್ನರ್‌ ಹಾಗೂ ಮೊದಲ ಟೆಸ್ಟ್‌ ಆಡಲಿಳಿದ ಕ್ಯಾಮರಾನ್‌ ಬಾನ್‌ಕ್ರಾಫ್ಟ್ ಸೇರಿಕೊಂಡು ಅಜೇಯ 173 ರನ್‌ ಪೇರಿಸಿ ಇಂಗ್ಲೆಂಡ್‌ ದಾಳಿಯನ್ನು ಧೂಳೀಪಟ ಮಾಡಿದರು.

Advertisement

170 ರನ್‌ ಗೆಲುವಿನ ಗುರಿ ಪಡೆದಿದ್ದ ಆಸ್ಟ್ರೇಲಿಯ 4ನೇ ದಿನದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 114 ರನ್‌ ಮಾಡಿ ಗೆಲುವನ್ನು ಖಾತ್ರಿಗೊಳಿಸಿತ್ತು; ಅಂತರವಷ್ಟೇ ಬಾಕಿ ಇತ್ತು. ಅಂತಿಮ ದಿನವಾದ ಸೋಮವಾರ ಕೂಡ ಅಜೇಯ ಓಟ ಬೆಳೆಸಿದ ವಾರ್ನರ್‌-ಬಾನ್‌ಕ್ರಾಫ್ಟ್ ಲಂಚ್‌ ಒಳಗಾಗಿ ತಂಡದ ಗೆಲುವನ್ನು ಸಾರಿದರು. ಆಗ ವಾರ್ನರ್‌ 87 ರನ್‌ (119 ಎಸೆತ, 10 ಬೌಂಡರಿ) ಮತ್ತು ಬಾನ್‌ಕ್ರಾಫ್ಟ್ 82 ರನ್‌ (182 ಎಸೆತ, 10 ಬೌಂಡರಿ, 1 ಸಿಕ್ಸರ್‌) ಮಾಡಿ ಔಟಾಗದೆ ಉಳಿದಿದ್ದರು. ಇದರೊಂದಿಗೆ ಚೊಚ್ಚಲ ಟೆಸ್ಟ್‌ ಪಂದ್ಯದ 4ನೇ ಇನ್ನಿಂಗ್ಸಿನಲ್ಲಿ ಅತ್ಯಧಿಕ ರನ್‌ ಬಾರಿಸಿದ ಆಸೀಸ್‌ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಬಾನ್‌ಕ್ರಾಫ್ಟ್ ಅವರದಾಯಿತು. 1958ರಷ್ಟು ಹಿಂದೆ ನಾರ್ಮ್ ಓ’ನೀಲ್‌ ಹೊಡೆದ 71 ರನ್ನುಗಳ ದಾಖಲೆ ಪತನಗೊಂಡಿತು.

ನೋಲಾಸ್‌ ದಾಖಲೆ
ಯಶಸ್ವಿ ನೋಲಾಸ್‌ ಚೇಸಿಂಗ್‌ ವೇಳೆ ಆಸೀಸ್‌ ಪಾಲಿಗೆ ಇದೊಂದು ನೂತನ ದಾಖಲೆ. ಇದರಿಂದ 87 ವರ್ಷಗಳ ಹಿಂದಿನ ದಾಖಲೆ ಪತನಗೊಂಡಿತು. 1930ರ ವೆಸ್ಟ್‌ ಇಂಡೀಸ್‌ ಎದುರಿನ ಅಡಿಲೇಡ್‌ ಟೆಸ್ಟ್‌ನಲ್ಲಿ ಆರ್ಚಿ ಜಾಕ್ಸನ್‌-ಬಿಲ್‌ ಪೋನ್ಸ್‌ಫೋರ್ಡ್‌ ಮೊದಲ ವಿಕೆಟಿಗೆ 172 ರನ್‌ ಪೇರಿಸಿ 10 ವಿಕೆಟ್‌ ಗೆಲುವು ತಂದಿತ್ತಿದ್ದರು. ಇದು ಆ್ಯಶಸ್‌ ಸರಣಿಯಲ್ಲಿ ಆಸ್ಟ್ರೇಲಿಯ ಸಾಧಿಸಿದ 7ನೇ 10 ವಿಕೆಟ್‌ ಗೆಲುವು.

ಮೊದಲ ಸರದಿಯಲ್ಲಿ 141 ರನ್‌ ಬಾರಿಸಿದ ಆಸೀಸ್‌ ಕಪ್ತಾನ ಸ್ಟೀವನ್‌ ಸ್ಮಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ತವರಿನಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯವನ್ನು ಆ್ಯಶಸ್‌ನಲ್ಲಿ ಮುನ್ನಡೆಸಿದ ಸ್ಮಿತ್‌ ಪಾಲಿಗೆ ಇದೊಂದು ಸ್ಮರಣೀಯ ಪಂದ್ಯವೆನಿಸಿತು.

ಈ ಜಯದೊಂದಿಗೆ ಆಸ್ಟ್ರೇಲಿಯ ಸತತ 29 ವರ್ಷ ಬ್ರಿಸ್ಬೇನ್‌ನಲ್ಲಿ ಅಜೇಯವಾಗಿ ಉಳಿದಂತಾಯಿತು. ಈ ಅವಧಿಯಲ್ಲಿ “ಗಾಬಾ’ದಲ್ಲಿ 22 ಗೆಲುವು ಕಂಡ ಕಾಂಗರೂ ಪಡೆ, ಏಳನ್ನು ಡ್ರಾ ಮಾಡಿಕೊಂಡಿದೆ. ಕೊನೆಯ ಸೋಲು 1988-89ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಎದುರಾಗಿತ್ತು.ಸರಣಿಯ ದ್ವಿತೀಯ ಟೆಸ್ಟ್‌ ಡಿ. 2ರಿಂದ ಅಡಿಲೇಡ್‌ನ‌ಲ್ಲಿ ಆರಂಭವಾಗಲಿದ್ದು, ಇದು ಹೊನಲು ಬೆಳಕಿನಲ್ಲಿ ಸಾಗಲಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-302 ಮತ್ತು 195. ಆಸ್ಟ್ರೇಲಿಯ-328 ಮತ್ತು ವಿಕೆಟ್‌ ನಷ್ಟವಿಲ್ಲದೆ 173 (ವಾರ್ನರ್‌ ಔಟಾಗದೆ 87, ಬಾನ್‌ಕ್ರಾಫ್ಟ್ ಔಟಾಗದೆ 82). ಪಂದ್ಯಶ್ರೇಷ್ಠ: ಸ್ಟಿವನ್‌ ಸ್ಮಿತ್‌.

Advertisement

Udayavani is now on Telegram. Click here to join our channel and stay updated with the latest news.

Next