Advertisement

ಭಾರತೀಯ ವಿಕಾಸ ಟ್ರಸ್ಟ್‌ಗೆ ಆಶ್ಡೆನ್ ಪ್ರಶಸ್ತಿ

12:53 AM Nov 07, 2021 | Team Udayavani |

ಉಡುಪಿ: ಸುಸ್ಥಿರ ಶಕ್ತಿಯ ಕೌಶಲ ವೃದ್ಧಿಯ ಸಾಧನೆಗಾಗಿ ದೊರೆಯುವ ಜಾಗತಿಕ ಮಟ್ಟದ “ಆಶ್ಡೆನ್ ಪ್ರಶಸ್ತಿ’ಯನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಗೆ ಪ್ರದಾನ ಮಾಡಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕ ಸ್ವ ಉದ್ಯೋಗಕ್ಕೆ ನೆರವಾಗುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಿವಿಟಿಯನ್ನು ಟಿ.ಎ. ಪೈ ಅವರು ಸ್ಥಾಪಿಸಿದ್ದರು.

Advertisement

ಲಂಡನ್‌ನ ಗ್ಲಾಸ್ಗೋದಲ್ಲಿ ಗುರುವಾರ ನಡೆದ ಸಿಒಪಿ 26 ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೋಸ್ಟರಿಕಾ ಗಣರಾಜ್ಯದ ಅಧ್ಯಕ್ಷ ಕಾರ್ಲೊಸ್‌ ಅಲ್ವಾರಾಡೊ ಕ್ವೆಸಾಡಾ ಅವರಿಂದ ಬಿವಿಟಿಯ ಮಾಸ್ಟರ್‌ ಟ್ರೈನರ್‌ ಸುಧೀರ್‌ ಕುಲಕರ್ಣಿ ಅವರು ಸುದೀಪ್ತ ಘೋಷ್‌ ಅವರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.

ಜಗತ್ತಿನ ವಿವಿಧೆಡೆ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳ ಜತೆಗೆ ಮಾಹಿತಿ ವಿನಿಮಯ ಮಾಡುವ ಮತ್ತು ಸಹಭಾಗಿತ್ವದ ಅವಕಾಶಗಳು ಬಿವಿಟಿಗೆ ಲಭ್ಯವಾಗಲಿವೆ. ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆ ಮಾಡುವ ಪರಿಹಾರಗಳಿಗೆ ಸಂಬಂಧಿಸಿ 20 ವರ್ಷಗಳಿಂದ ಆಶ್ಡೆನ್ ಕೆಲಸ ಮಾಡುತ್ತಿದೆ. ಇದೇ ಮಾದರಿಯ ಕೆಲಸಗಳನ್ನು ಮಾಡುತ್ತಿರುವ ಜಗತ್ತಿನ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡುತ್ತಿದೆ. ಬಿವಿಟಿಯು ಹವಾಮಾನ ಬದಲಾವಣೆಯ ತೀವ್ರತೆಯನ್ನು ತಗ್ಗಿಸುವುದಷ್ಟೇ ಅಲ್ಲದೆ ಉದ್ಯೋಗ ಸೃಷ್ಟಿಯತ್ತಲೂ ಕೆಲಸ ಮಾಡುತ್ತಿದೆ.

ಪರಿಸರಸ್ನೇಹಿ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ತರಬೇತಿಗಳೊಂದಿಗೆ ಶಿಕ್ಷಣವನ್ನೂ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಬಿವಿಟಿಯ ಕಾರ್ಯವೈಖರಿಗೆ ವಿಶೇಷ ಮನ್ನಣೆ ಲಭಿಸಿದೆ. ಹಲವು ಸುತ್ತುಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಶ್ಡೆನ್ ಅಧಿಕಾರಿಗಳ ತಂಡ ಸ್ವತಃ ಭೇಟಿ ನೀಡಿ, ಬಿವಿಟಿಯ ಕಾರ್ಯ ವೈಖರಿಯನ್ನು ವೀಕ್ಷಿಸಿ ಮೌಲ್ಯಮಾಪನ ಮಾಡಿದೆ.

ಇದನ್ನೂ ಓದಿ:ನ. 8ರಿಂದ 15ರವರೆಗೆ ಜೆಡಿಎಸ್‌ ಎರಡನೇ ಹಂತದ ಕಾರ್ಯಾಗಾರ ಆರಂಭ: ಎಚ್‌ಡಿಕೆ

Advertisement

ಡಾ| ವೀರೇಂದ್ರ ಹೆಗ್ಗಡೆ ಹರ್ಷ
ಬಿವಿಟಿ ಆಧುನಿಕ ಇಂಧನ ಕ್ಷೇತ್ರದಲ್ಲಿ ದೀರ್ಘ‌ಕಾಲದಿಂದ ಮೌನವಾಗಿ ಕಾರ್ಯನಿರ್ವಹಿಸುತ್ತಿದೆ. ಟ್ರಸ್ಟ್ ತನ್ನ ಸಂಸ್ಥಾಪಕ ದಿ| ಟಿ.ಎ. ಪೈ ಅವರ 40ನೇ ಪುಣ್ಯಸ್ಮರಣೆ ಸಂದರ್ಭ ಈ ಪ್ರಶಸ್ತಿ ಪಡೆದಿರುವುದು ಸ್ಮರಣೀಯವಾಗಿದೆ.

ಹಸುರು ಶಕ್ತಿ
ಸಾಲಗಳಿಗೆ ಹಣಕಾಸು ಒದಗಿಸಲು ಬ್ಯಾಂಕರ್‌ಗಳಿಗೆ ತರಬೇತಿ ನೀಡುವ ಟ್ರಸ್ಟ್‌ಗಳ ಪ್ರಯತ್ನಗಳು ಶ್ಲಾಘನೀಯ. ಇಂತಹ ಸಾಧನೆಗೈದ ಸಂಸ್ಥೆಗೆ ಪ್ರಶಸ್ತಿ ಲಭಿಸಿರುವುದು ಅರ್ಹವಾದ ಮನ್ನಣೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹರ್ಷ ವ್ಯಕ್ತಪಡಿಸಿದ್ದಾರೆ. ಎರಡು ದಶಕಗಳಲ್ಲಿ ಸಂಸ್ಥೆಯ ವಿವಿಧ ಪಾಲುದಾರರಲ್ಲಿ ಸಾವಿರಕ್ಕೂ ಹೆಚ್ಚು ಸಿಬಂದಿಗೆ ಬಿವಿಟಿ ಸೌರಶಕ್ತಿ ಕೌಶಲಗಳ ಕುರಿತು ತರಬೇತಿ ನೀಡಿದ್ದು, ಯುವಕರಿಗೆ ಉದ್ಯೋಗ ಒದಗಿಸುವ, ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿದೆ. ನೇರವಾಗಿ ಪಾಲುದಾರರಿಗೆ ತರಬೇತಿ ನೀಡಿದ್ದಲ್ಲದೆ, ಬಳಕೆದಾರರಿಗೂ ತರಬೇತಿ ನೀಡುವ ಈ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಿದೆ. ಈ ಪ್ರಶಸ್ತಿಯಿಂದ ಬಿವಿಟಿಯ ಕೆಲಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಂತಾಗಿದೆ.
-ಟಿ. ಅಶೋಕ್‌ ಪೈ
ವ್ಯವಸ್ಥಾಪಕ ಟ್ರಸ್ಟಿ, ಬಿವಿಟಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next