Advertisement

ಆಶಾ ಕಾರ್ಯಕರ್ತೆಯರ ಹೆಸರಲ್ಲಿ ಬೇನಾಮಿ ವ್ಯಕ್ತಿಗೆ ಪ್ರೋತ್ಸಾಹ ಧನ

11:20 AM May 16, 2017 | Harsha Rao |

ಬೆಂಗಳೂರು: ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಆಶಾ ಕಾರ್ಯ
ಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಹೆಸರಿನಲ್ಲಿ ಸಂಬಂಧವಿಲ್ಲದ ಆರು ಮಂದಿ ಖಾಸಗಿ ವ್ಯಕ್ತಿ, ಮಹಿಳೆಯರಿಗೆ ಬರೋಬ್ಬರಿ 31.67 ಲಕ್ಷ ರೂ. ಅಕ್ರಮವಾಗಿ ಪಾವತಿಸಿ ವಂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಇತ್ತೀಚೆಗೆ ನಡೆದ ಲೆಕ್ಕಪರಿಶೋಧನೆಯಲ್ಲಿ ಈ ಅಕ್ರಮ ಬಯಲಾಗಿದ್ದು, ಕಚೇರಿ ಸಿಬ್ಬಂದಿಯೂ ಶಾಮೀಲಾಗಿ
ವಂಚಿಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಅಕೌಂಟೆಂಟ್‌ನ್ನು
ವಜಾಗೊಳಿಸಿ ಇಲಾಖೆಗೆ ವಂಚಿಸಿದ್ದ 31.67 ಲಕ್ಷ ರೂ. ಹಣವನ್ನು ಅವರಿಂದಲೇ ವಸೂಲಿ ಮಾಡಲಾಗಿದೆ. ಆದರೆ ಕರ್ತವ್ಯ ನಿರ್ಲಕ್ಷ್ಯ ತೋರಿ ಇಲಾಖೆಗೆ ನಷ್ಟವಾಗಲು ಕಾರಣರಾಗಿದ್ದವರ ವಿರುದಟಛಿ ಯಾವುದೇ ಕ್ರಮ ಕೈಗೊಂಡಿಲ್ಲ
ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಲೆಕ್ಕ ಅಧೀಕ್ಷಕರ ನೇತೃತ್ವದ ಲೆಕ್ಕ ಪರಿಶೋಧನಾ ತಂಡ ಸಲ್ಲಿಸಿರುವ ವರದಿ
“ಉದಯವಾಣಿ’ಗೆ ಲಭ್ಯವಾಗಿದೆ.

ಅಕ್ರಮದ ಸುಳಿವು: ಜಿಲ್ಲೆಯಲ್ಲಿ ನ್ಯಾಷನಲ್‌ ವೆಕ್ಟರ್‌ ಬಾರ್ನ್ ಡಿಸೀಸ್‌ ಕಂಟ್ರೋಲ್‌ ಪ್ರೋಗ್ರಾಮ್‌ (ಎನ್‌ವಿಬಿಡಿಸಿಪಿ)
ಜಾರಿಗೆ ಸಂಬಂಧಪಟ್ಟ ವೆಚ್ಚಗಳ ಪರಿಶೀಲನೆ ವೇಳೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆಯಲ್ಲಿ
ಪುರುಷರಿಗೂ ನೀಡಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಆಳವಾಗಿ ಪರಿಶೀಲನೆ ನಡೆಸಿದಾಗ
ಆಶಾ ಕಾರ್ಯಕರ್ತೆಯರಲ್ಲದ ಸುನಂದಮ್ಮ ಹಾಗೂ ಎಸ್‌.ಶ್ರೀದೇವಿ ಎಂಬುವರಿಗೆ ಕ್ರಮವಾಗಿ 36,500 ರೂ. ಹಾಗೂ 38,500 ರೂ. ಪಾವತಿಯಾಗಿರುವುದು ಲೆಕ್ಕಪರಿಶೋಧನಾ ತಂಡಕ್ಕೆ ಅನುಮಾನ ಮೂಡಿಸಿತ್ತು.

ಆ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಬ್ಯಾಂಕ್‌ ಶಾಖೆ ಮೂಲಕ ಪಾವತಿಸಲಾದ ಎಲ್ಲಾ ವಿವರಗಳನ್ನು ಬ್ಯಾಂಕ್‌ನ ದಾಖಲಾತಿಗಳೊಂದಿಗೆ ಪರಿಶೀಲಿಸಿದಾಗ 2013-14ರಿಂದ 2016-17ನೇ ಸಾಲಿನವರೆಗೆ ಆರು ಬೇನಾಮಿ ವ್ಯಕ್ತಿ, ಮಹಿಳೆಯರ ಖಾತೆಗೆ ಎನ್‌ ವಿಬಿಡಿಸಿಪಿ ಕಾರ್ಯಕ್ರಮದಡಿ ಒಟ್ಟು 31,67,825 ರೂ. ಪಾವತಿಸಿರುವುದು ಪತ್ತೆಯಾಯಿತು.

ಈ ಆರು ಮಂದಿ ಆಶಾ ಕಾರ್ಯಕರ್ತೆಯರಲ್ಲ: ಟಿ.ಆರ್‌. ಉಮಾಶಂಕರ್‌ಗೆ 8.05 ಲಕ್ಷ ರೂ., ಡಿ.ಆರ್‌.ಸತೀಶ್‌ಗೆ
8.73 ಲಕ್ಷ ರೂ., ಶ್ರೀದೇವಿಗೆ 7.21 ಲಕ್ಷ ರೂ., ಸುನಂದಮ್ಮಗೆ 6.24 ಲಕ್ಷ ರೂ., ಸಿ.ಮಂಜುನಾಥ್‌ಗೆ 11,925
ರೂ., ಶೈಲಜಾಗೆ 25,824 ರೂ. ಹಣ ಪಾವತಿ ಯಾಗಿತ್ತು. ಪರಿಶೀಲಿಸಿದಾಗ ಉಮಾಶಂಕರ್‌ ಹಾಗೂ ಸತೀಶ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಟ್ಯಾಕ್ಸಿಗಳನ್ನು ಗುತ್ತಿಗೆ ಆಧಾರದಡಿ ಒದಗಿಸುತ್ತಿದ್ದವರಾಗಿದ್ದರು. ಇಲಾಖೆಯೊಂದಿಗೆ ಸಂಬಂಧವಿಲ್ಲದ 6 ಮಂದಿಯ ಖಾತೆಗೆ ಜಮೆಯಾಗಿರುವ ಮೊತ್ತದ ಬಗ್ಗೆ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು (ಹಾಲಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ) ತುಮಕೂರು ಕೇಂದ್ರ ಕಚೇರಿಗೆ ತೆರಳಿ ಪರಿಶೀಲಿಸಿದ ಲೆಕ್ಕಪರಿಶೋಧನಾ ತಂಡಕ್ಕೆ ಅಚ್ಚರಿ ಕಾದಿತ್ತು.

Advertisement

ಆಗ ಟಿ.ಉಮಾಶಂಕರ ಹಾಗೂ ಶ್ರೀದೇವಿ ಪತಿ- ಪತ್ನಿಯಾಗಿರುವುದು ಹಾಗೂ ಡಿ.ಆರ್‌.ಸತೀಶ್‌ ಹಾಗೂ ಸುನಂದಮ್ಮ ಮಗ- ತಾಯಿಯಾಗಿರುವುದು ಪತ್ತೆಯಾಯಿತು.

ಇಲಾಖೆ ಸಿಬ್ಬಂದಿ ಶಾಮೀಲು: ತುಮಕೂರು ಡಿಎಚ್‌ಒ, ಜಿಲ್ಲಾ ಎನ್‌ವಿಬಿಡಿಸಿಪಿ ಕಾರ್ಯಕ್ರಮ ಅಧಿಕಾರಿ, ತುಮಕೂರು ಜಿಲ್ಲಾ ನೋಡಲ್‌ ಅಧಿಕಾರಿ (ರಾಷ್ಟ್ರೀಯ ಆರೋಗ್ಯ ಅಭಿಯಾನ), ತುಮಕೂರಿನ ಸಮವರ್ತಿ ಲೆಕ್ಕ ಪರಿಶೋಧಕ ಎಸ್‌.ವಿಶ್ವನಾಥ್‌ ಹಾಗೂ ಎನ್‌ವಿಬಿಡಿಸಿಪಿ ಅಕೌಂಟೆಂಟ್‌ ಕರ್ತವ್ಯ ಲೋಪ ಎಸಗಿದ್ದಾರೆ. ಇದರಲ್ಲಿ ಡಿಎಚ್‌ಒ ಕಚೇರಿ ಸಿಬ್ಬಂದಿಯೂ ಶಾಮೀಲಾಗಿರುವುದು ಸಾಬೀತಾಗಿದೆ. ಲೆಕ್ಕಪರಿಶೋಧನಾ ತಂಡದ ಅಭಿಪ್ರಾಯ ಎನ್‌ವಿಬಿಡಿಸಿಪಿ ಕಾರ್ಯಕ್ರಮದಡಿ 2013-14ರಿಂದ 2016-17ರವರೆಗೆ (2016ರ ಡಿಸೆಂಬರ್‌ ಅಂತ್ಯಕ್ಕೆ) 31.67 ಲಕ್ಷ ರೂ. ಸಂಬಂಧಪಡದ ವ್ಯಕ್ತಿಗಳಿಗೆ ಅಕ್ರಮವಾಗಿ ಜಮೆಯಾಗಿದೆ.

ಹಾಗಾಗಿ ಆರು ಮಂದಿ ವಿರುದಟಛಿ ಪ್ರಥಮ ವರ್ತಮಾನ ವರದಿ ದಾಖಲಿಸಿದರೆ ಇನ್ನಷ್ಟು ಪ್ರಕರಣಗಳು ಬಯಲಾಗುವ ನಿರೀಕ್ಷೆ ಇದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದಟಛಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಅನ್ವಯ ಶಿಸ್ತು ಕ್ರಮ ಜರುಗಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next