ಹಾವೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ತಮ್ಮ ತಮ್ಮ ಮನೆ ಹಾಗೂ ಕೆಲಸದ ಸ್ಥಳದಿಂದ ಆನ್‌ಲೈನ್ ಮೂಲಕ ಪ್ರತಿಭಟನೆ ನಡೆಸಿದರು.
ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕದಿಂದಾಗಿ ಹಳ್ಳಿಗಳು ನಲುಗುತ್ತಿವೆ. ಬಹುತೇಕ ಮನೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜನತೆಗೆ ಭರವಸೆಯ ಆತ್ಮವಿಶ್ವಾಸ ತುಂಬಿ, ಮುನ್ನೆಚ್ಚರಿಕೆ ಹಾಗೂ ಜಾಗೃತಿಯನ್ನು ಆಶಾ ಕಾರ್ಯಕರ್ತೆಯರು ಮೂಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಅಸುರಕ್ಷತೆ ವ್ಯವಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಐಎಲ್‌ಐ ಮತ್ತು ಎಸ್‌ಎಆರ್‌ಐ ಸರ್ವೇ, ಮಾತ್ರೆ ಹಂಚುವುದು, ಕೋವಿಡ್ ಕಿಟ್ ಹಂಚುವುದು, ಸೋಂಕಿನ ಲಕ್ಷಣ ಕಂಡಲ್ಲಿ ಪರೀಕ್ಷೆಗೆ ಕಳುಹಿಸಿರುವುದು, ಮನೆಗಳಿಗೆ ಹೋಗಿ ದಿನನಿತ್ಯ ಅವರ ಆರೋಗ್ಯದ ಮಾಹಿತಿಯನ್ನು ಇಲಾಖೆಗೆ ಒದಗಿಸುವುದು, ಒಂದನೆ-ಎರಡನೇ ಸಂಪರ್ಕಿತರನ್ನು ಗುರುತಿಸುವುದು ಸೇರಿದಂತೆ ವಿವಿಧ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಕಳೆದ 2 ತಿಂಗಳ ಮತ್ತು ಮೇ ತಿಂಗಳು ಸೇರಿದರೆ 3 ತಿಂಗಳಿಂದ ವೇತನ ನೀಡದೆ ಇಲಾಖೆ ಆಶಾ ಕಾರ್ಯಕರ್ತೆಯರನ್ನು ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ದೂರಿದರು.
ಆಶಾ ಕಾರ್ಯಕರ್ತೆಯರಿಗೆ ಕೆಲಸ ಮಾಡುವುದಕ್ಕೆ ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಕೊಡದ ಇಲಾಖೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆದೆ. ಪ್ರತಿ ಜಿಲ್ಲೆಯಲ್ಲಿ 20ರಿಂದ 40 ಜನ ಆಶಾ ಕಾರ್ಯಕರ್ತೆಯರು ಸೋಂಕಿಗೊಳಗಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಅವರ ಕುಟುಂಬದವರನ್ನು ಸಶಕ್ತಗೊಳಿಸಲು ಪ್ರತಿ ಆಶಾ ಕಾರ್ಯಕರ್ತೆಯರಿಗೆ 25,000 ಸಾವಿರ ರೂ. ಪರಿಹಾರ ನೀಡುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ್, ಜಿಲ್ಲಾ ಅಧ್ಯಕ್ಷೆ ಜಯಶೀಲ ಬಂಕಾಪುರಮಠ, ಉಪಾಧ್ಯಕ್ಷೆ ಮಂಜುಳಾ ಮಾಸೂರ, ಪುಷ್ಪಾ, ಗೀತಾ ಮಡಿವಾಳರ, ವನಜಾಕ್ಷಿ ಅರ್ಕಾಚಾರಿ, ರೂಪಾ ಮಾನೆ ಸೇರಿದಂತೆ ಜಿಲ್ಲೆ, ತಾಲೂಕಿನ ನೂರಾರು ಆಶಾ ಕಾರ್ಯರ್ತೆಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.