Advertisement

ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ಗೌರವಧನ ಖಾತ್ರಿಪಡಿಸಿ

05:49 PM Jul 01, 2020 | Suhan S |

ಕೊಪ್ಪಳ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂ. ಗೌರವಧನ ಖಾತ್ರಿಪಡಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಡಿಸಿ ಎಂ.ಪಿ. ಮಾರುತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಆಶಾ ಕಾರ್ಯಕರ್ತೆಯರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ಮಾಡಿ, ಕೊಟ್ಟ ಕೆಲಸಕ್ಕೆ ತಕ್ಕ ವೇತನ ನೀಡಬೇಕು. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೋತ್ಸಾಹ ಧನ ಮತ್ತು ಗೌರವಧನ ಎರಡು ರೀತಿಯ ಮಿಶ್ರಣ ಮಾಡಿ ವಿಚಿತ್ರವಾಗಿ ವೇತನ ನೀಡುತ್ತಿದ್ದಾರೆ. ಸರ್ಕಾರ ಕೆಂದ್ರ ಹಾಗೂ ರಾಜ್ಯ ಸರ್ಕಾರದ ಒಟ್ಟು ಗೌರವಧನವನ್ನು ಮಾಸಿಕ 12 ಸಾವಿರ ಖಾತ್ರಿ ಪಡಿಸಿ ನೀಡಬೇಕು ಎಂದು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರನ್ನು ಕೋವಿಡ್ ವಾರಿಯರ್ಸ್‌ ಎಂದು ಸರ್ಕಾರ ಪರಿಗಣಿಸಿರುವುದು ಅವರ ಸೇವೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಸೋಂಕಿತರ ನಡುವೆ ನಿತ್ಯವೂ ಕೆಲಸ ಮಾಡುವ ಈ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಕಾರ್ಯಕರ್ತೆಯರಿಗೆ ಅಗತ್ಯವಾಗಿ ಬೇಕಾದ ಮಾಸ್ಕ್, ಫೇಸ್‌ಶೀಲ್ಡ್‌, ಹ್ಯಾಂಡ್‌ಗ್ಲೌಸ್‌, ಸ್ಯಾನಿಟೈಸರ್‌ ಸೇರಿ ಇತರೆ ಸಾಮಗ್ರಿ ವಿತರಿಸುತ್ತಿಲ್ಲ. ಅದರಿಂದ ಅವರಿಗೆ ಸಮರ್ಪಕ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಕೌಶಲ್ಯ, ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಭಾಗ್ಯನಗರ, ಸುನಿತಾ, ಗಂಗಾ, ಹುಲಿಗೆಮ್ಮ, ಶಾರದಾ, ಲಕ್ಷ್ಮೀ, ಧರ್ಮವ್ವ, ಮಹಾದೇವಿ, ಶೈನಜಾ, ರಾಜೇಶ್ವರಿ, ಶೋಭಾ, ಯಶೋಧಾ, ಸಾವಿತ್ರಿ, ಮಂಜುಳಾ, ಗಾಯತ್ರಿ, ಶಂಕರಮ್ಮ ಕೆ, ಜ್ಯೋತಿ, ಶಶಿಕಲಾ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next