ದಾವಣಗೆರೆ: ಮುಂದಿನ ಬಜೆಟ್‌ನಲ್ಲಿಯೇ ಆಶಾ ಕಾರ್ಯಕರ್ತೆಯರಿಗೆ ನಿಗದಿತ ವೇತನ ನೀಡುವ ಬಗ್ಗೆ ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಸಮ್ಮತಿಸಿದ್ದಾರೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದ್ದಾರೆ. ಚನ್ನಗಿರಿ ವಿರುಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಆಶಾ ಕಾರ್ಯಕರ್ತರ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.
ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ನಿಗದಿತ ವೇತನ ನೀಡುವ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅವರುಒಂದುವೇಳೆ ಮಾತಿಗೆ ತಪ್ಪಿದರೆ ರಾಜ್ಯದಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ.
4ಧಿ5 ತಿಂಗಳು ವೇತನವಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಅನೇಕ ಕಾರ್ಯಕರ್ತೆಯರು ನಮ್ಮಲ್ಲಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಮಾಸಿಕ ನಿರ್ದಿಷ್ಟ ವೇತನ ನೀಡಬೇಕು. ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ಉಚಿತ ಆರೋಗ್ಯ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು. ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಮ್ಯಾಚಿಂಗ್ ಗ್ರಾಂಟ್ ಬದಲು ನಿಗದಿತ ವೇತನ ಕಲ್ಪಿಸಬೇಕು.
ಕಾನೂನು ಬದ್ಧವಾಗಿ ಕನಿಷ್ಠ ಮಾಸಿಕ 18 ಸಾವಿರ ರೂ. ವೇತನ ನೀಡುವಂತೆ ಬೇಡಿಕೆಇಡಲಾಗಿದೆ ಎಂದು ಅವರು ಹೇಳಿದರು. ಸರ್ಕಾರ ನಮ್ಮ ಕಷ್ಟ ಮನಗಂಡು ಬೇರೆಲ್ಲಾ ರಾಜ್ಯಗಳಲ್ಲಿ ಆಶಾಕಾರ್ಯಕರ್ತೆಯರಿಗೆ ಇರುವ ವೇತನಕ್ಕಿಂತ ಹೆಚ್ಚು ನಿಗದಿ ಪಡಿಸುವ ಭರವಸೆ ನೀಡಿದೆ. ಕೇಂದ್ರ ಸರ್ಕಾರ ಕೂಡಾ ಆಶಾ ಕಾರ್ಯಕರ್ತೆಯರಿಗೆ ಪಿಎಫ್, ಇಎಸ್‌ಐ ಸೌಲಭ್ಯ ಕಲ್ಪಿಸುವುದಾಗಿ ಹೇಳಿರುವುದು ಸಂತಸದ ಸಂಗತಿ ಎಂದರು.
ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಸಮವಸ್ತ್ರ, ಬ್ಯಾಗ್ ಮತ್ತಿತರ ಪರಿಕರಗಳನ್ನು ಕಳೆದ ಮೂರು ತಿಂಗಳ ಹಿಂದೆಯೇ ಖರೀದಿಸಲಾಗಿದೆ. ಆದರೆ, ವಿತರಣೆಯಲ್ಲಿ ವಿಳಂಬ ಮಾಡಲಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಪರಿಕರಗಳನ್ನು ವಿತರಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಸಂಘಟನೆ, ನಾಯಕತ್ವವೊಂದೇ ಪರಿಹಾರವಾಗಿದೆ.
ಎಲ್ಲರೂ ಒಟ್ಟಾಗಿ ನಮಗೆ ನ್ಯಾಯಯುತವಾಗಿ ದಕ್ಕಬೇಕಾದ ಸೌಲಭ್ಯ ಪಡೆಯಲು ಹೋರಾಡಬೇಕಿದೆ ಎಂದು ಅವರು ತಿಳಿಸಿದರು. ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ, ಮಂಜುನಾಥ್ ಕುಕ್ಕುವಾಡ, ಹೊನ್ನಾಳಿ ಲಕ್ಷ್ಮಿದೇವಿ, ದಾವಣಗೆರೆಯಅನಿತಾ, ಹರಪನಹಳ್ಳಿ ಗೀತಾ, ಜಗಳೂರಿನ ಲೀಲಾವತಿ, ಹರಿಹರದ ಕರಿಬಸಮ್ಮ, ಚನ್ನಗಿರಿಯ ಮಧುಬಾಯಿ ಹಾಗೂ ಜಿಲ್ಲಾ ಕಾರ್ಯಕರ್ತರಾದ ಶಿವಾಜಿರಾವ್, ಪರಶುರಾಮ್, ಭಾರತಿ, ತಿಪ್ಪೇಸ್ವಾಮಿ, ಶಶಿಕುಮಾರ್, ಮಂಜುನಾಥ ಕೈದಾಳೆ ವೇದಿಕೆಯಲ್ಲಿದ್ದರು.