ದಾವಣಗೆರೆ: ರೈತರ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ ನೀಡಲು ಕ್ರಮ, ಬಜೆಟ್‌ನಲ್ಲಿ ವೇತನ ಹೆಚ್ಚಳ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಪಿಐ, ಎಐಟಿಯುಸಿ ಪದಾಧಿಕಾರಿಗಳು, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿದ್ದಾರೆ.
ಶ್ರೀ ಜಯದೇವ ವೃತ್ತದಿಂದ ಮೆರವಣಿಗೆ ಮೂಲಕ ಉಪ ವಿಭಾಗಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಲು ಮನವಿ ಸಲ್ಲಿಸಿದರು. ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾಗಿ ರಾಜ್ಯದ 176 ತಾಲೂಕುಗಳ ಪೈಕಿ 160 ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 17,500 ಕೋಟಿ, ಹಿಂಗಾರು ಮಳೆ ಕೈಕೊಟ್ಟು 7,160 ಕೋಟಿ ರೂ. ಬೆಳೆ, 45 ಲಕ್ಷ ಟನ್ ಆಹಾರಧಾನ್ಯ ನಷ್ಟವಾಗಿದೆ ಎಂದು ಸರ್ಕಾರವೇ ಅಂದಾಜಿಸಿದೆ.
ಕೇಂದ್ರ, ರಾಜ್ಯ ಸರ್ಕಾರ ಕೂಡಲೇ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ವಿವಿಧ ಕಾರಣದಿಂದ ಬ್ಯಾಂಕ್, ಸಹಕಾರ ಸಂಘದಲ್ಲಿ ಸಾಲ ಪಡೆಯದೆ ಬೆಳೆ ನಷ್ಟಕ್ಕೆ ತುತ್ತಾಗಿರುವ ರೈತರಿಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಜನ, ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಒದಗಿಸುವ ಮೂಲಕ ಜನರನೆರವಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ, ಹೋಬಳಿ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು, ರೈತ, ಕೃಷಿ, ಕಾರ್ಮಿಕ, ಯುವಕ ಸಂಘದ ಪ್ರತಿನಿಧಿಗಳನ್ನೊಳಗೊಂಡ ಬರಗಾಲ ಕುಂದು ಕೊರತೆ ಉಸ್ತುವಾರಿ ಸಮಿತಿ ರಚಿಸಿಬೇಕು.
ಶಾಶ್ವತ ಬರಗಾಲ ಪೀಡಿತ ಪ್ರದೇಶಗಳಾದ ಚಿತ್ರದುರ್ಗ, ಕೋಲಾರ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಖಾತರಿ ಯೋಜನೆಯ ಮೂಲಕ 365 ದಿನ ಉದ್ಯೋಗ ಕೊಡುವಂತಾಗಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರು ಹಾಗೂ ಆಶಾ ಕಾರ್ಯಕರ್ತರ ವೇತನ ಹೆಚ್ಚಳದ ಘೋಷಣೆ, ಬಿಸಿಯೂಟ ಕಾರ್ಯಕರ್ತರಿಗೆ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಮಾಸಿಕ 18 ಸಾವಿರ ವೇತನ ನಿಗದಿ, ಬಿಸಿಯೂಟ ಯೋಜನಾ ನಿಗಮವನ್ನಾಗಿ ಪರಿವರ್ತಿಸುವ ಮೂಲಕ ನಿಜ ಅರ್ಥದಲ್ಲಿ ಮಹಿಳಾ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2010 ರಲ್ಲಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಕಾರ್ಯಕ್ರಮದಡಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಕನಿಷ್ಠ ಮಟ್ಟದ ಜೀವನ ಸಾಗಿಸಲಾಗದ ವೇತನ ಪಡೆಯುತ್ತಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಉದ್ಯೋಗದ ಭದ್ರತೆಯೇ ಇಲ್ಲ. ಆಶಾ ಕಾರ್ಯಕರ್ತೆಯರನ್ನು ಮೇಲ್ವಿಚಾರಕರಾಗಿ ನೇಮಿಸಿ, 5 ಸಾವಿರ ವೇತನ ನಿಗದಿಪಡಿಸಿರುವುದು ಒಳ್ಳೆಯ ಉದ್ದೇಶ. ಆದರೆ, ಅದರಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ.
ಎಲ್ಲರನ್ನೂ ಪೂರ್ಣ ಕಾಲದ ಸಿ ಗ್ರೂಪ್ ನೌಕರರೆಂದು ಪರಿಗಣಿಸಿ, 18 ಸಾವಿರ ವೇತನ, ಆರೋಗ್ಯ ವಿಮೆ, ಭವಿಷ್ಯ ನಿಧಿ, ಗ್ರಾಚ್ಯುಯಿಟಿ ಇತರೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ಹಿರಿಯ ಕಾರ್ಮಿಕ ಮುಖಂಡ ಎಚ್. ಕೆ. ರಾಮಚಂದ್ರಪ್ಪ, ಆನಂದರಾಜ್, ಐರಣಿ ಚಂದ್ರು, ಆವರಗೆರೆ ಉಮೇಶ್, ಆವರಗೆರೆ ವಾಸು, ಪಾಲವನಹಳ್ಳಿ ಪ್ರಸನ್ನಕುಮಾರ್, ಗುಡಿಹಳ್ಳಿ ಹಾಲೇಶ್, ಸುನೀತಾ, ಶಕೀಲಾಬಾನು, ಕವಿತಾ, ರುದ್ರಮ್ಮ ಬೆಳಲಗೆರೆ, ಜ್ಯೋತಿಲಕ್ಷ್ಮಿ, ಸರೋಜಾ, ಪ್ರಮೀಳಾ, ಮಹಮ್ಮದ್ ಬಾಷಾ, ಟಿ.ಎಸ್. ನಾಗರಾಜ್, ಲಲಿತಾ ಇತರರು ಇದ್ದರು.