ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಆಶಾ ಕಾರ್ಯಕರ್ತೆ ಸಮವಸ್ತ್ರದಲ್ಲಿರುವ ಮಹಿಳೆ ಹಾಗೂ ವ್ಯಕ್ತಿಯೊಬ್ಬರ ನಡುವೆ ಆಸ್ಪತ್ರೆಯಲ್ಲಿಯೇ ಮುತ್ತಿನ ಪ್ರಣಯ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಇಂಡಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ.
ಇಂಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಈ ಘಟನೆಯಲ್ಲಿರುವುದು ತಾಂಬಾ ಗ್ರಾ.ಪಂ. ಸದಸ್ಯ ಹಾಗೂ ಸದರಿ ಮಹಿಳೆ ಆಶಾ ಕಾರ್ಯಕರ್ತೆ ಎನ್ನಲಾಗುತ್ತಿದೆ.
ಈ ಕುರಿತು ಉದಯವಾಣಿ ಜೊತೆ ಮಾತನಾಡಿರುವ ಡಿ ಎಚ್ ಓ ಡಾ.ರಾಜಕುಮಾರ ಯರಗಲ್ಲ, ಸದರಿ ವಿಷಯ ಈಗಷ್ಟೇ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ಆಶಾ ಕಾರ್ಯಕರ್ತೆಗೆ ನೋಟಿಸ್ ನೀಡಿ, ಸೇವೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ.
ಅಲ್ಲದೇ ಸರ್ಕಾರಿ ಆಸ್ಪತ್ರೆಯ ಪರಿಸರವನ್ನು ದುರ್ಬಳಕೆ ಮಾಡಿಕೊಂಡ ಕಾರಣ ಪೊಲೀಸ್ ದೂರು ನೀಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ.
ಇಂಡಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಘಟನೆಯ ತನಿಖೆ ನಡೆದಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ಅರ್ಚನಾ ಅವರಿಂದ ಇಲಾಖಾ ವಿಚಾರಣೆಯನ್ನೂ ನಡೆಸಲಾಗುತ್ತದೆ ಎಂದು ವಿವರಿಸಿದ್ದಾರೆ.
ದೃಶ್ಯದಲ್ಲಿ ಅಶಾ ಕಾರ್ಯಕರ್ತೆಯ ಜೊತೆಗೆ ಇರುವ ವ್ಯಕ್ತಿ ಯಾರು, ಘಟನೆ ಯಾವಾಗ ನಡೆಯಿತು ಎಂಬ ನಿಖರ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ತನಿಖೆಯ ಬಳಿಕ ವಿವರ ಬಹಿರಂಗ ಆಗಲಿದೆ ಎಂದು ಡಿಎಚ್ಓ ಸ್ಪಷ್ಟಪಡಿಸಿದ್ದಾರೆ.