ಬೆಂಗಳೂರು: ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಐದನೇ ಆರೋಪಿ ಆಸೀಂ ಷರೀಪ್‌ಗೆ ಜಾಮೀನು ನೀಡಲು ಜಾಮೀನು ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ಆಸೀಂ ಷರೀಪ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಸಿದ್ದಲಿಂಗ ಪ್ರಭು ವಜಾಗೊಳಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ತಮ್ಮ ಪಾತ್ರವೇನಿಲ್ಲ. ವಿನಾಕಾರಣ ಕೆಲವು ದೂರವಾಣಿ ಕರೆಗಳ ಆಧಾರದಲ್ಲಿ ಪ್ರಕರಣದ ಆರೋಪಿಯನ್ನಾಗಿ ಸಿಲುಕಿಸಲಾಗಿದೆ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದ ಆರೋಪಿಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪ್ರಕರಣದಲ್ಲಿ ಎನ್‌ಐಎ ಪರ ವಿಶೇಷ ಅಭಿಯೋಜಕರಾಗಿ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.ಆರೋಪಿ ಮನೆಯಲ್ಲಿ ಕೃತ್ಯದ ಸಂಚು ರೂಪಿತವಾಗಿದ್ದು, ಇತರೆ ಆರೋಪಿಗಳ ಬ್ರೈನ್ ವಾಶ್ ಮಾಡಿ ನಿರ್ದಿಷ್ಟ ಸಂಸ್ಥೆಯ ಆರ್‌ಎಸ್‌ಎಸ್ ವ್ಯಕ್ತಿಯ ಹತ್ಯೆಗೆ ಪ್ರಚೋದನೆ ನೀಡಿದ್ದು, ಹತ್ಯೆ ನಡೆದಿದೆ. ಆರೋಪಿಗಳ ಕೃತ್ಯ ಶೈಲಿ ಜಾಮೀನಿಗೆ ಅರ್ಹವಾಗಿಲ್ಲ.
ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ ಅನ್ವಯ ಆರೋಪಿಗಳ ಅನ್ವಯ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿದ್ದಾರೆ ಎಂಬ ಅಂಶಗಳನ್ನು ಪರಿಗಣಿಸಿ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಪ್ರಸನ್ನಕುಮಾರ್ ತಿಳಿಸಿದರು.
ಕಮರ್ಷಿಯಲ್ ಸ್ಟ್ರೀಟ್‌ನ ಶಿವಾಜಿ ಸರ್ಕಲ್‌ನಲ್ಲಿ 2016 ಅಕ್ಟೋಬರ್ 16ರಂದು ನಡೆದ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಅವರ ಭೀಕರ ಹತ್ಯೆ ನಡೆದಿತ್ತು. ಈ ಸಂಬಂಧ ತನಿಖೆ ಪೂರ್ಣಗೊಳಿಸಿದ ಎನ್‌ಐಎ ಪಿಎಫ್ಐ ಸಂಘಟನೆಯ ಐವರು ಆರೋಪಿಗಳಾದ ಇರ್ಫಾನ್ ಪಾಶಾ,
ವಾಸೀಂ ಅಹಮದ್, ಮೊಹಮದ್ ಸಾದಿಕ್, ಮೊಹಮದ್ ಮುಜೀಬುಲ್ಲಾ ಹಾಗೂ ಆಸೀಂ ಷರೀಪ್ ವಿರುದ್ಧ ಐಪಿಸಿ ಕಲಂ 302,120 ಬಿ, ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ ಕಲಂ 16(ಎ) 18,20 ಅನ್ವಯ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.