ಗದಗ: ಇತ್ತೀಚೆಗೆ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ನಿರಾಶ್ರಿತರು ಎಲ್ಲವನ್ನೂ ಕಳೆದುಕೊಂಡಿದ್ದರೂ ಮತ್ತೆ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ದಶಕದ ಹಿಂದೆ ನಿರ್ಮಿಸಿದ್ದ ಆಸರೆ ಮನೆಗಳು ಈ ಬಾರಿ ಪ್ರವಾಹ ಸಂತ್ರಸ್ತರಿಗೆ ಆಸರೆಯಾಗಿವೆ. ಆದರೆ, ಅವು ಈಗಾಗಲೇ ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡಂತಿದೆ ಜನರ ಪರಿಸ್ಥಿತಿ. ಭಯದಲ್ಲೇ ದಿನ ಕಳೆಯುವಂತಾಗಿದೆ.
ಹೌದು. 2007, 2009ರಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಗ್ರಾಮಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಆ ಪೈಕಿ ರೋಣ ತಾಲೂಕಿನ ಅಸೂಟಿ ಗ್ರಾ.ಪಂ. ವ್ಯಾಪ್ತಿ ಮೇಗೂರು ನವ ಗ್ರಾಮದಲ್ಲಿ 300, ಹೊಳೆಮಣ್ಣೂರಿನ 554 ಹಾಗೂ ಗಾಡಗೋಳಿ 500 ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದಾಗಿ ಬರೋಬ್ಬರಿ ಒಂದು ದಶಕದಷ್ಟು ಜನರ ವಾಸವಿಲ್ಲದೇ ಪಾಳು ಬಿದ್ದಿದ್ದವು.
ಆದರೆ, ಎರಡು ತಿಂಗಳಿಂದ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಅಬ್ಬರಿಸಿದ್ದರಿಂದ ಈ ಭಾಗದ ಹತ್ತು ಹಲವು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಸಂಖ್ಯೆಯಲ್ಲಿ ಮನೆಗಳು ಕುಸಿದಿದ್ದರಿಂದ ಆಸರೆ ಮನೆಗಳಿಗೆ ಬೇಡಿಕೆ ಬಂದಿದೆ. ಹಳೆ ಊರಲ್ಲಿ ಮನೆ ಕಳೆದುಕೊಂಡವರು ನವಗ್ರಾಮದ ಸುಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ಇದೀಗ ಆ ಮನೆಗಳೂ ಬಿರುಕು ಬಿಡುತ್ತಿರುವುದು, ಮೆಲ್ಛಾವಣಿಯಿಂದ ಸಿಮೆಂಟ್ ಉದುರುತ್ತಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ತೇವಗೊಂಡ ಗೋಡೆಗಳು: ಮೇಗೂರು, ಹೊಳೆಮಣ್ಣೂರು, ಗಾಡಗೋಳಿ ನವ ಗ್ರಾಮದ ಬಹುತೇಕ ಮನೆ ಗೋಡೆಗಳಲ್ಲಿ ನೀರು ಇಂಗುತ್ತಿದ್ದು, ತೇವಗೊಂಡಿವೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿಇಲ್ಲಿನ ಬಹುತೇಕ ಮನೆಗಳು ಸೋರುತ್ತಿವೆ. ಅಲ್ಪಸ್ವಲ್ಪ ಮಳೆಯಾದರೂ ಮೆಲ್ಛಾವಣಿಯಿಂದ ನೀರಿನ ಹನಿ ಬೀಳುತ್ತವೆ. ನೀರಿನ ಹನಿ ಬೀಳುವ ಜಾಗದಲ್ಲಿ ಪಾತ್ರೆ, ಪಗಡೆಗಳನ್ನಿಟ್ಟು ರಾತ್ರಿ ಇಡೀಜಾಗರಣೆ ಮಾಡುವಂತಾಗಿದೆ ಎಂಬುದು ಸಂತ್ರಸ್ತರ ಅಳಲು. ಮಳೆ ನೀರಿನಿಂದ ಹಸಿಯಾಗಿರುವ ಮೇಲ್ಛಾವಣಿಯ ಸಿಮೆಂಟ್ ಕೂಡಾ ಉದುರಿ ಬೀಳುತ್ತಿದೆ. ಜೊತೆಗೆ ಗೋಡೆಗಳು ಬಿರುಕು ಬಿಟ್ಟಿದ್ದು, ಬಹುತೇಕ ಶಿಥಿಲಗೊಂಡಿವೆ. ಮಳೆ ಹೆಚ್ಚುತ್ತಿದ್ದಂತೆ ಗೋಡೆ ಹಾಗೂ ಮೇಲ್ಛಾವಣಿ ತನ್ನ ಸಾಮರ್ಥ್ಯ ಕಳೆದುಕೊಳ್ಳುವಂತಿದ್ದು, ಯಾವಾಗ ಬೀಳುತ್ತೋ ಎಂಬ ಭಯ ಆವರಿಸಿದೆ ಎನ್ನುತ್ತಾರೆ ಹೊಳೆಮಣ್ಣೂರು ನವ ಗ್ರಾಮದ ಮಹದೇವಪ್ಪ ಕರಿಗೌಡ್ರು.
ಮತ್ತೆ ಆಸರೆ ಮನೆಗಳತ್ತ ಹೆಜ್ಜೆ: ಇತ್ತೀಚೆಗೆ ಉಂಟಾಗಿದ್ದ ಪ್ರವಾಹದ ನಂತರ ಗಟ್ಟಿ ಮನೆ ಉಳ್ಳವರು ಹಳೇ ಊರಿಗೆ ತೆರಳಿದ್ದರು. ಈ ನಡುವೆ ದೀಪಾವಳಿ ಆಚರಣೆಗಾಗಿ ಹಳೆ ಊರಿನ ಮನೆಯನ್ನು ಅಗತ್ಯ ದುರಸ್ತಿಯೊಂದಿಗೆ ಸುಣ್ಣ-ಬಣ್ಣ ಬಳಿದು ಹಬ್ಬಕ್ಕೆ ಸಿದ್ಧಗೊಳಿಸಲಾಗಿತ್ತು. ಆದರೆ, ಇದೀಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದರಿಂದ ಪುನಃ ಆಸರೆ ಮನೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಳಿದುಳಿದ ಮನೆಗಳನ್ನೇ ರಿಪೇರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇನ್ನೂ ಹಕ್ಕು ಪತ್ರಗಳ ವಿತರಣೆಯಾಗದ ಕಾರಣ ಯಾರೊಬ್ಬರೂ ಶಾಶ್ವತ ದುರಸ್ತಿಗೆ ಮುಂದಾಗುತ್ತಿಲ್ಲ.
ಹಲವು ವರ್ಷಗಳಿಂದ ಮನೆಗಳು ಪಾಳು ಬಿದ್ದಿದ್ದರಿಂದ ಬಹುತೇಕ ಶಿಥಿಲಗೊಂಡಿವೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಗಳು ಮುಟ್ಟಿದರೆ ಬೀಳುವ ಸ್ಥಿತಿಯಲ್ಲಿವೆ. ಸದ್ಯ ಊರಲ್ಲಿ ನೆರೆ ಬರುತ್ತಿದ್ದರಿಂದ ತಾತ್ಕಾಲಿಕವಿದ್ಯುತ್ ಮತ್ತಿತರೆ ದುರಸ್ತಿ ಮಾಡಿಕೊಂಡು ಇದೇ ಮನೆಗಳಲ್ಲಿ ವಾಸ ಮಾಡುವುದು ಅನಿವಾರ್ಯ
.-ಮುನ್ನಾಸಾಬ್ ನದಾಫ್, ಗಾಡಗೋಳಿ ನವಗ್ರಾಮ ನಿವಾಸಿ
-ವೀರೇಂದ್ರ ನಾಗಲದಿನ್ನಿ