ಜೋಧ್‌ಪುರ: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಬುಧವಾರ ಇಲ್ಲಿಯ ಕೆಳಹಂತದ ವಿಶೇಷ ಕೋರ್ಟ್ ತೀರ್ಪು ನೀಡಿದೆ.
ಸದ್ಯ 77 ರ ಹರೆಯದ ಅಸಾರಾಂಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ನೀಡುವ ಸಾಧ್ಯತೆಗಳಿವೆ.
ನ್ಯಾಯಮೂರ್ತಿ ಮಧುಸೂದನ್ ಜೋಷಿ ಅವರ ಪೀಠ ತೀರ್ಪು ನೀಡಿದ್ದು, ಅಸಾರಾಂ ಬಾಪು ಸಹಿತ ಎಲ್ಲಾ ಐವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿರುವುದಾಗಿ ವರದಿಯಾಗಿದೆ.
ಅಸಾರಾಂ ಬಾಪುವನ್ನು 2 ಪ್ರತ್ಯೇಕ ಅತ್ಯಾಚಾರ ಪ್ರಕರಣಗಳ ಆರೋಪದಲ್ಲಿ 2013 ರಲ್ಲಿ ಬಂಧನಕ್ಕೆ ಗುರಿಪಡಿಸಿ ಜೋಧ್‌ಪುರ ಜೈಲಿನಲ್ಲಿಡಲಾಗಿದೆ. ಉತ್ತರಪ್ರದೇಶದ ಶಹಜಹಾನ್‌ಪುರ ಮೂಲದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಅಸಾರಾಂ ಮೇಲಿತ್ತು. ಸಂತ್ರಸ್ಥ ಬಾಲಕಿ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ತೀರ್ಪಿನ ಹಿನ್ನೆಲೆಯಲ್ಲಿ ರಾಜಸ್ಥಾನ, ಗುಜರಾತ್ ಹಾಗೂ ಹರ್ಯಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆಗಳು ಇರುವುದರಿಂದ ರಾಜಸ್ಥಾನ ಹೈಕೋರ್ಟ್ ಆದೇಶದ ಮೇರೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.