ಹೊಸದಿಲ್ಲಿ: ಅಸಾನಿ ಚಂಡಮಾರುತವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ತೀರವನ್ನು ಸಮೀಪಿಸುತ್ತಿದ್ದಂತೆ, ಕೇಂದ್ರ ಸರ್ಕಾರವು ಶನಿವಾರದಂದು ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಯ (ಎನ್ ಡಿಆರ್ ಎಫ್) ಆರು ತಂಡಗಳನ್ನು ನಿಯೋಜಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡ ಪ್ರದೇಶವು ಮಾರ್ಚ್ 20 ರಂದು ಬೆಳಿಗ್ಗೆ ಸ್ಪಷ್ಟವಾಗಿ ಗುರುತಿಸಲ್ಪಟ್ಟಿದ್ದು, ಮಾರ್ಚ್ 21 ರಂದು ಇದು ಚಂಡಮಾರುತವಾಗಿ ಬದಲಾಗುತ್ತದೆ. ನಂತರ ಅದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉದ್ದಕ್ಕೂ ಚಲಿಸುತ್ತದೆ. ಮಾರ್ಚ್ 22 ರಂದು ಬಾಂಗ್ಲಾದೇಶ-ಉತ್ತರ ಮ್ಯಾನ್ಮಾರ್ ಕರಾವಳಿಯನ್ನು ತಲುಪುತ್ತದೆ.
ಮಾರ್ಚ್ 21 ರಂದು ಚಂಡಮಾರುತ ತೀವ್ರಗೊಳ್ಳುತ್ತದೆ. ರವಿವಾರ ಅಂಡಮಾನ್ ದ್ವೀಪಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಫ್ರೀಸ್ಟೈಲ್: ಸ್ಯಾಮ್ ಸಂಗ್‍ನ ಪುಟ್ಟ ಪ್ರೊಜೆಕ್ಟರ್ ಸದ್ಯದಲ್ಲೇ ಬಿಡುಗಡೆ
ಸ್ಥಳೀಯ ಆಡಳಿತವು ಅಸಾನಿ ಚಂಡಮಾರುತದ ಅಪಾಯದ ವಿರುದ್ಧ ಮೀನುಗಾರರ ಕಾಲೋನಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಮತ್ತು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಉತ್ತರ ಮತ್ತು ಮಧ್ಯ ಅಂಡಮಾನ್‌ನ ಉಪ ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಮಳೆಯಾಗಿದೆ. ಶನಿವಾರ ರಾತ್ರಿಯೂ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.