Advertisement

ಆಸಂಗಿ ಬ್ಯಾರೇಜ್‌ವರೆಗೆ ಬಂದಿಲ್ಲ ಬೆಣ್ಣಿ ಹಳ್ಳದ ನೀರು

07:05 AM May 28, 2019 | Suhan S |

ಗುಳೇದಗುಡ್ಡ: ಕಳೆದ 4-5ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಬೆಣ್ಣಿ ಹಳ್ಳದ ಪ್ರವಾಹದಿಂದ ಮಲಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದು. ಇದರಿಂದ 6 ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹವಾಗಿದೆ. ಆದರೆ, ಗೇಟ್ ತೆರವುಗೊಳಿಸದ ಕಾರಣ ಆಸಂಗಿ ಬ್ಯಾರೇಜ್‌ ಸೇರಿದಂತೆ ಎರಡು ಬ್ಯಾರೇಜ್‌ಗಳು ಖಾಲಿಯಾಗಿದೆ.

Advertisement

ಮೂರ್‍ನಾಲ್ಕು ದಿನಗಳಿಂದ ನಾಗರಾಳ, ಆಸಂಗಿ ಬ್ಯಾರೇಜ್‌ ಹೊರತುಪಡಿಸಿ, ಬಾದಾಮಿ ತಾಲೂಕಿನಲ್ಲಿ ಬರುವ ಸುಮಾರು ಆರು ಬ್ಯಾರೇಜ್‌ಗಳಲ್ಲಿ ನೀರು ಬಂದಿದೆ. ಉಳಿದ ಬ್ಯಾರೇಜ್‌ಗಳಲ್ಲಿ ಗೇಟ್ ಹಾಕಿರುವುದರಿಂದ ನೀರು ಮುಂದೆ ಹರಿದು ಬಂದಿಲ್ಲ. ಇದರಿಂದ ಈ ಭಾಗದ ಎರಡು ಬ್ಯಾರೇಜ್‌ ಮಾತ್ರ ಖಾಲಿಯಾಗಿವೆ. ಇದರಿಂದ ಈ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಎಲ್ಲೆಲ್ಲಿ ತುಂಬಿವೆ: ತಾಲೂಕು ಅಧಿಕಾರಿಗಳ ಪ್ರಕಾರ ಬೆಣ್ಣಿ ಹಳ್ಳದ ಪ್ರವಾಹದಿಂದ ಮಲಪ್ರಭಾ ನದಿಗೆ ನೀರು ಹರಿದು ಬಂದಿದ್ದು, ಈ ನದಿ ವ್ಯಾಪ್ತಿಗೆ ಬರುವ ಮಣ್ಣೇರಿ, ಕಾತರಕಿ, ಚೊಳಚಗುಡ್ಡ, ಕಾಟಾಪುರ, ಬಾಚಿನಗುಡ್ಡ, ಶಿವಯೋಗಮಂದಿರ ಒಟ್ಟು 6 ಬ್ಯಾರೇಜ್‌ಗಳು ತುಂಬಿವೆ. ಜನರಿಗಿಂತ ಜಾಸ್ತಿ ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದ್ದು, ನಮ್ಮ ಭಾಗದ ಬ್ಯಾರೇಜ್‌ನಲ್ಲಿ ನೀರಿಲ್ಲ. ಸದ್ಯ ಬಂದಿರುವ ಬೆಣ್ಣಿ ಹಳ್ಳದ ನೀರು ಆಸಂಗಿ ಬ್ಯಾರೇಜ್‌ಗೆ ಹರಿದು ಬರುವಂತೆ ಮಾಡಲು ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲವೆಂದು ಆಸಂಗಿ, ನಾಗರಾಳ, ಲಾಯದಗುಂದಿ, ಸಬ್ಬಲಹುಣಸಿ ಗ್ರಾಮಸ್ಥರು ದೂರಿದ್ದಾರೆ.

ಬಹುಗ್ರಾಮ ಯೋಜನೆಗೂ ನೀರಿಲ್ಲ: ಆಸಂಗಿ ಬ್ಯಾರೇಜ್‌ನಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಲಾಯದಗುಂದಿ, ಕೋಟೆಕಲ್, ಪರ್ವತಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ, ಅಷ್ಟೇ ಅಲ್ಲದೇ ಹಳದೂರ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳಿಗೂ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯ ಬ್ಯಾರೇಜ್‌ ಖಾಲಿಯಾಗಿರುವುದರಿಂದ ಈ ಯೋಜನೆಯ ಗ್ರಾಮಗಳಿಗೂ ನೀರಿನ ಸಮಸ್ಯೆ ಎದುರಾಗಲಿದೆ. ಬ್ಯಾರೇಜ್‌ಗೆ ಹಾಕಿರುವ ಗೇಟ್ ತೆರವುಗೊಳಿಸಿ, ಆಸಂಗಿ, ನಾಗರಾಳ ಬ್ಯಾರೇಜ್‌ಗೆ ನೀರು ಬರುವಂತೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಭಾಗದ ಬಹುಗ್ರಾಮ ಕುಡಿಯುವ ಯೋಜನೆಗೂ ನೀರಿಲ್ಲ. ದನಕರುಗಳಿಗೆ ನೀರಿಲ್ಲ. ಕಳೆದ ಒಂದು ತಿಂಗಳಿಂದ ನದಿ ಬತ್ತಿ ಹೋಗಿದೆ. ಸದ್ಯ ಬೆಣ್ಣಿ ಹಳ್ಳದ ನೀರು ಮಲಪ್ರಭೆಗೆ ಹರಿದು ಬಂದಿದೆ. ಆದರೆ ಶಿವಯೋಗಮಂದಿರ ಸೇರಿದಂತೆ ಇನ್ನಿತರ ಕಡೆಗಳ ಬ್ಯಾರೇಜ್‌ನಲ್ಲಿ ನೀರು ಸಂಗ್ರಹಿಸಿದ್ದಾರೆ. ಕೆಲ ಬ್ಯಾರೇಜ್‌ಗಳಿಗೆ ಹಾಕಿರುವ ಗೇಟ್ ತೆಗೆದು ಬೆಣ್ಣಿ ಹಳ್ಳದ ನೀರು ಆಸಂಗಿ ಬ್ಯಾರೇಜ್‌ಗೆ ಹರಿಸಿ, ಈ ಭಾಗದ ಜನರ ನೀರಿನ ಬವಣೆ ನೀಗಿಸಬೇಕು.•ಶರಣು ಸಜ್ಜನ, ಗ್ರಾಪಂ ಅಧ್ಯಕ್ಷರು, ಲಾಯದಗುಂದಿ
ಬೆಣ್ಣಿ ಹಳ್ಳದ ಪ್ರವಾಹದಿಂದ ಮಲಪ್ರಭಾ ನದಿಗೆ ನೀರು ಹರಿದು ಬಂದಿದ್ದು, ಮಣ್ಣೇರಿ, ಕಾತರಕಿ, ಚೊಳಚಗುಡ್ಡ, ಕಾಟಾಪೂರ, ಬಾಚಿನಗುಡ್ಡ, ಶಿವಯೋಗಮಂದಿರ ಸೇರಿದಂತೆ ಒಟ್ಟು 6 ಬ್ಯಾರೇಜ್‌ಗಳಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹಿಸಲಾಗಿದೆ. ಆಸಂಗಿ, ನಾಗರಾಳ ಬ್ಯಾರೇಜ್‌ಗೂ ನೀರು ಹರಿಸಲು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ, ಗೇಟ್ ತೆಗೆಸುವ ಕೆಲಸ ಮಾಡುತ್ತೇನೆ. •ಎಸ್‌.ಎಸ್‌.ಇಂಗಳೆ, ತಹಶೀಲ್ದಾರ್‌ ಬಾದಾಮಿ
•ಮಲ್ಲಿಕಾರ್ಜುನ ಕಲಕೇರಿ
Advertisement

Udayavani is now on Telegram. Click here to join our channel and stay updated with the latest news.

Next