ಹೊಸದಿಲ್ಲಿ: ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದಿನ್ ಓವೈಸಿ ಅವರು ಇಂದು ಲೋಕಸಭೆ ಕಲಾಪದಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಈ ವೇಳೆ ಅವರು ಮಾಡಿದ ಘೋಷಣೆ ವಿವಾದಕ್ಕೆ ಕಾರಣವಾಗಿದೆ.
ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ ಅವರು ಬಳಿಕ ಸಂಘರ್ಷ-ಪೀಡಿತ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದರು, ಅವರ ರಾಜ್ಯವಾದ ತೆಲಂಗಾಣವನ್ನು ಹೊಗಳಿದರು.
ಐದು ಬಾರಿಯ ಸಂಸದ ಓವೈಸಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದರು. ಓವೈಸಿಯ ಈ ಘೋಷಣೆಗೆ ಬಿಜೆಪಿ ನಾಯಕರು ಆಕ್ಷೇಪಿಸಿದ್ದಾರೆ. ಸಂಸತ್ ನ ಕಡತದಿಂದ ಓವೈಸಿ ಮಾತನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಔಪಚಾರಿಕ ಪ್ರಮಾಣ ವಚನವನ್ನು ಮೀರಿದ ಯಾವುದೇ ಹೇಳಿಕೆಗಳನ್ನು ದಾಖಲಿಸುವುದಿಲ್ಲ ಎಂದು ಆಗ ಸಭಾಧ್ಯಕ್ಷರಾಗಿದ್ದ ಬಿಜೆಪಿ ನಾಯಕ ರಾಧಾ ಮೋಹನ್ ಸಿಂಗ್ ಸದಸ್ಯರಿಗೆ ಭರವಸೆ ನೀಡಿದರು. ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾತ್ರ ಅಧಿಕೃತವಾಗಿ ಗಮನಿಸುತ್ತಿದ್ದಾರೆ ಎಂದು ದೃಢಪಡಿಸಿದರು.
ಪ್ಯಾಲೆಸ್ತೀನ್ ಪರ ಘೋಷಣೆಯನ್ನು ಸಮರ್ಥಿಸಿಕೊಂಡ ಓವೈಸಿ ಬಳಿಕ ಮಾತನಾಡಿ, “ಇತರ ಸದಸ್ಯರು ಬೇರೆ ವಿಷಯಗಳನ್ನು ಹೇಳುತ್ತಿದ್ದಾರೆ. ನಾನು ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಎಂದೆ. ಅದರಲ್ಲಿ ತಪ್ಪೇನಿದೆ. ಸಂವಿಧಾನದಲ್ಲಿ ಹಾಗೆಲ್ಲಿದೆ? ಬೇರೆಯವರು ಏನು ಹೇಳಿದರು ಎನ್ನುವುದನ್ನೂ ನೀವು ಕೇಳಬೇಕು. ನಾನು ಏನು ಹೇಳಬೇಕಿತ್ತೋ ಅದನ್ನು ಹೇಳಿದೆ. ಪ್ಯಾಲೆಸ್ತೀನ್ ಬಗ್ಗೆ ಮಹಾತ್ಮ ಗಾಂಧಿ ಏನು ಹೇಳಿದ್ದಾರೆ ಎಂದು ಬೇಕಾದರೆ ಓದಿ” ಎಂದರು.
ಪ್ಯಾಲೆಸ್ತೀನ್ ಅನ್ನು ಪ್ರಸ್ತಾಪಿಸಲು ಕಾರಣವನ್ನು ಕೇಳಿದಾಗ, ಓವೈಸಿ ಅವರು “ಅವರು ತುಳಿತಕ್ಕೊಳಗಾದ ಜನರು” ಎಂದು ಹೇಳಿದರು.
ಈ ನಡುವೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರ ಕಚೇರಿಗೆ ಪತ್ರ ಬರೆದಿದ್ದಾರೆ. ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುವಂತೆ ಓವೈಸಿ ಅವರನ್ನು ಕೇಳುವಂತೆ ಹಂಗಾಮಿ ಸ್ಪೀಕರ್ ಗೆ ಮನವಿ ಮಾಡಿದರು.