ಮಣಿಪಾಲ: ಮಣಿಪಾಲ ಪೈ ಕುಟುಂಬದ ಸದಸ್ಯ ರಾಜ್ ಪೈ (ರಜನೇಶ್ ಪೈ) ಅವರು ಅಮೆರಿಕದ ಪ್ರತಿಷ್ಠಿತ ಗೂಗಲ್ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ರಾಜ್ ಪೈ ಅವರು ಕ್ಲೌಡ್ ಕೃತಕ ಬುದ್ಧಿಮತ್ತೆ (ಎಐ) ತಂಡದ ನಿರ್ವಹಣೆಯನ್ನು ನೋಡಿಕೊಳ್ಳುವರು. ಗೂಗಲ್ ಸಂಸ್ಥೆ ಕ್ಲೌಡ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡ ಬಯಸಿರುವುದು ಈ ನೇಮಕಾತಿಯ ಸಂಕೇತವಾಗಿದೆ.
ಪೈಯವರು ಅಮೆಜಾನ್, ಸಿಯಾಟಲ್‌ನಿಂದ ಈ ಹುದ್ದೆಗೆ ಬಂದಿದ್ದಾರೆ. ಅವರು ಅಮೆಜಾನ್ ಎಡಬ್ಲ್ಯುಎಸ್ ಉಪಾಧ್ಯಕ್ಷರಾಗಿದ್ದರು. ಅವರು ಅಮೆಜಾನ್ ಸಂಸ್ಥೆಯಲ್ಲಿ ಆರಂಭದಲ್ಲಿ ನಿರ್ದೇಶಕರಾಗಿ (ಉತ್ಪಾದನ ನಿರ್ವಹಣೆ, ಅಮೆಜಾನ್ ಎಲಾಸ್ಟಿಕ್ ಕಂಪ್ಯೂಟ್ ಕ್ಲೌಡ್- ಇಸಿ 2) ಸೇವೆ ಸಲ್ಲಿಸಿದ್ದರು.
ಇದಕ್ಕೂ ಹಿಂದೆ ಮೈಕ್ರೋಸಾಫ್ಟ್, ಸಿಯಾಟಲ್‌ನಲ್ಲಿ 15 ವರ್ಷ ಹಾಟ್‌ಮೇಲ್, ವಿಜುವಲ್ ಸ್ಟುಡಿಯೋ, ವಿಂಡೋಸ್ 8 ಡೆವಲಪರ್ ಟೂಲ್ಸ್ ಹೀಗೆ ವಿವಿಧ ತಂಡಗಳನ್ನು ಮುನ್ನಡೆಸಿದ್ದರು. ಕೊನೆಯಲ್ಲಿ ಆಫೀಸ್ 365 ಎಕ್ಸ್ ಚೇಂಜ್ ಎಂಟರ್‌ಪ್ರೈಸ್ ಕ್ಲೌಡ್ ನ ಗ್ರೂಪ್ ಪ್ರೊಗ್ರಾಂ ಮ್ಯಾನೇಜರ್ ಆಗಿದ್ದರು. ರಾಜ್ ಪೈಯವರು ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ಮತ್ತು ಅಮೆಜಾನ್‌ನ ಜೆಫ್ ಬೆಜೋಸ್ ಅವರ ನಿಕಟವರ್ತಿಯಾಗಿದ್ದರು.
ರಾಜ್ ಪೈಯವರು ಸ್ಟಾನ್‌ಫೋರ್ಡ್ ವಿ.ವಿ.ಯಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಬಿಎಸ್ ಪದವಿ ಪಡೆದಿದ್ದಾರೆ. ಇವರು ಮಣಿಪಾಲ ಕೆಎಂಸಿಯಲ್ಲಿ ವಿಶೇಷ ಗೌರವಕ್ಕೆ ಪಾತ್ರ ರಾಗಿದ್ದ, ಕೆಎಂಸಿ ಆರಂಭದ ಕಾಲದಲ್ಲಿ ಅನಾಟಮಿ ಪ್ರಾಧ್ಯಾಪಕರಾಗಿದ್ದ ದಿ| ಡಾ| ಟಿ. ಉಮೇಶರಾಯ ಪೈ ಮತ್ತು ನಳಿನಿ ಪೈ ದಂಪತಿಯ ಪುತ್ರ.ರಾಜ್ ಅವರ ಪತ್ನಿ ಕ್ರಿಸ್ಟಾ ಮತ್ತು ಗೆವಿನ್, ಡಿಲಾನ್, ಸರಿನಾ ಹೀಗೆ ಮೂವರು ಮಕ್ಕಳನ್ನು ಹೊಂದಿದ್ದಾರೆ.