Advertisement

ಠಾಣೆ ಕಟ್ಟಡ ಉದ್ಘಾಟನೆ ಎಂದು?

12:42 AM Dec 24, 2019 | Lakshmi GovindaRaj |

ಕೆ.ಆರ್‌.ಪುರ: ಸಂಚಾರ ಪೋಲಿಸರ ಬಹುದಿನಗಳ ಬೇಡಿಕೆಯಂತೆ ನಿರ್ಮಿಸಿರುವ ಕೆ.ಆರ್‌.ಪುರ ಸಂಚಾರ ಪೋಲಿಸ್‌ ಠಾಣೆಯ ನೂತನ ಕಟ್ಟಡ ಸಂಪೂರ್ಣ ಸಿದ್ಧವಾಗಿ ವರ್ಷ ಕಳೆದರೂ ಉದ್ಘಾಟನೆಯಾಗಿಲ್ಲ.

Advertisement

ಪ್ರಸ್ತುತ ಮಾರುಕಟ್ಟೆ ಸಮೀಪ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ ಹಳೇ ಕಟ್ಟಡದಲ್ಲಿ ಕೆ.ಆರ್‌.ಪುರ ಸಂಚಾರ ಪೋಲಿಸ್‌ ಠಾಣೆ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸದಾ ಸಂಚಾರ ದಟ್ಟಣೆ ಇರುತ್ತದೆ. ಅದರಲ್ಲೂ ಭಾರೀ ವಾಹನಗಳು ಹೆಚ್ಚು ಸಂಚರಿಸುತ್ತವೆ. ಇದರ ನಡುವೆ ಠಾಣೆ ಸಮೀಪವೇ ಸಂಚಾರ ಪೊಲೀಸರು ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಾರೆ. ಇದರಿಂದ ರಸ್ತೆಯುದ್ದಕ್ಕೂ ವಾಹನಗಳು ನಿಂತು ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಜತೆಗೆ ಹಾಕಿ ಠಾಣೆ ಇರುವ ಕಟ್ಟಡ ತೀರಾ ಹಳೆಯದಾಗಿರುವುದನ್ನು ಮನಗಂಡು ಎರಡು ವರ್ಷದ ಹಿಂದೆ ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ ಅವರು ಹಳೇ ಮದ್ರಾಸ್‌ ರಸ್ತೆಯ ಕೆ.ಆರ್‌.ಪುರ ಎಕ್ಸ್‌ಟೆನ್ಷನ್‌ ಬಳಿಯ ನಿವೇಶನದಲ್ಲಿ ಸಂಚಾರ ಪೊಲೀಸ್‌ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿತ್ತು.

ಇನ್ನೇನು ಕಟ್ಟಡ ಲೋಕಾರ್ಪಣೆಗೆ ದಿನಾಂಕ ನಿಗದಿ ಮಾಡಬೇಕೆನ್ನುವಷ್ಟರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಕಟ್ಟಡ ಲೋಕಾರ್ಪಣೆ ಮುಂದಕ್ಕೆ ಹೋಯಿತು. ಚುನಾವಣೆ ಮುಗಿದು ತಿಂಗಳುಗಳು ಕಳೆದರೂ ಕಟ್ಟಡ ಉದ್ಘಾಟಿಸುವ ಸುಳಿವೇ ಸಿಗಲಿಲ್ಲ. ಈ ಮಧ್ಯೆ ವಿಧಾನಸಭೆ ಉಪಚುನಾವಣೆ ಬಂದಿದ್ದರಿಂದ ಉದ್ಘಾಟನೆ ಮತ್ತಷ್ಟು ವಿಳಂಬವಾಯಿತು.

ಈಗ ಯಾವ ಅಡೆತಡೆಗಳಿಲ್ಲವಾದರೂ ಕಟ್ಟಡ ಲೋಕಾರ್ಪಣೆಗೆ ಹಿರಿಯ ಅಧಿಕಾರಿಗಳಾಗಲಿ, ಸಚಿವರಾಗಲಿ ಆಸಕ್ತಿ ತೋರುತ್ತಿಲ್ಲ. ಸಂಚಾರ ಠಾಣೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದರಿಂದ ಹಾಲಿ ಠಾಣೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಬಹುದು ಎಂಬುದು ಸಾರ್ವಜನಿಕರ ಅನಿಸಿಕೆ.

Advertisement

ಸಮುಚ್ಛಯ ಸಿದ್ಧವಾದ ಬಳಿಕ ಉದ್ಘಾಟನೆ: ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿರುವ ಪೊಲೀಸ್‌ ಠಾಣೆ ಕಟ್ಟಡದ ಪಕ್ಕದಲ್ಲೇ ಪೊಲೀಸ್‌ ಸಿಬ್ಬಂದಿಯ ವಸತಿ ಸಮುಚ್ಛಯಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇವುಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಸಂಚಾರ ಠಾಣೆ ಹಾಗೂ ಸಮುಚ್ಛಯಗಳನ್ನು ಒಟ್ಟಿಗೇ ಉದ್ಘಾಟನೆ ಮಾಡುವ ಉದ್ದೇಶವಿದೆ ಎಂದು ಹೇಳಲಾಗುತ್ತಿದೆ.

ಪೊಲೀಸ್‌ ಸಿಬ್ಬಂದಿ ವಸತಿ ಸಮುಚ್ಛಯಗಳ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕನಿಷ್ಠ 6 ತಿಂಗಳಗಳು ಬೇಕಿದ್ದು, ಅಲ್ಲಿಯವರೆಗೆ ಸಂಚಾರ ಪೊಲೀಸ್‌ ಠಾಣೆಗೂ ಉದ್ಘಾಟನೆ ಭಾಗ್ಯವಿಲ್ಲ ಎನ್ನಲಾಗುತ್ತಿದೆ. ಒಂದರ ಹಿಂದೆ ಒಂದು ಚುನಾವಣೆಗಳು ಎದುರಾದ ಕಾರಣ ಕಟ್ಟಡ ಉದ್ಘಾಟನೆ ಸಾಧ್ಯವಾಗಿಲ್ಲ. ಈ ವಿಷಯವನ್ನು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಜನವರಿಯಲ್ಲಿ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಸಂಚಾರ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next