ಹೊಸದಿಲ್ಲಿ: ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂಕೋರ್ಟ್ ತೀರ್ಪಿಗೆ ಇನ್ನೇನು ಕೆಲವೇ ದಿನಗಳಲ್ಲಿ ಒಂದು ವರ್ಷವಾಗಲಿದೆ…! ಇಂಥ ಸಂದರ್ಭದಲ್ಲೇ, ಸಲಿಂಗಕಾಮ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಇಬ್ಬರು ಮಹಿಳಾ ವಕೀಲರು, ತಾವಿಬ್ಬರೂ ಜತೆಯಾಗಿದ್ದೇವೆ, ನಾವೀಗ ದಂಪತಿ ಎಂದು ಘೋಷಿಸಿಕೊಂಡಿದ್ದಾರೆ.
ಹೌದು, ಇವರಿಬ್ಬರ ಹೆಸರು ಅರುಂಧತಿ ಕಾಟ್ಜು ಮತ್ತು ಮೇನಕಾ ಗುರುಸ್ವಾಮಿ. ವಿಶೇಷವೆಂದರೆ ಇವರು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಪರ ವಾದ ಮಾಡಿಕೊಂಡಿರಲಿಲ್ಲ. ಬದಲಾಗಿ ಐವರು ಅರ್ಜಿದಾರರ ಪರ ವಾದ ಮಾಡಿ ಕೇಸನ್ನೂ ಗೆದ್ದಿದ್ದರು.
2013ರಲ್ಲಿ ಇದೇ ಕೋರ್ಟ್ ಸಲಿಂಗಕಾಮ ಅಪರಾಧ ಎಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸಲ್ಲಿಕೆ ಮಾಡಲಾಗಿದ್ದ ಅರ್ಜಿಗಳ ಪರ ವಾದ ಮಾಡಿದ್ದರು. ಈ ಕೇಸನ್ನೂ ಗೆದ್ದು, ಸಲಿಂಗಕಾಮ ಅಪರಾಧ ಎಂಬ ಸಂವಿಧಾನದ 377ರ ವಿಧಿ ತೆಗೆದುಹಾಕುವಂಥ ಬಹುದೊಡ್ಡ ತೀರ್ಪು ಬರಲೂ ಕಾರಣವಾಗಿದ್ದರು.
2018ರ ಸೆ.6ರಂದು ಸುಪ್ರೀಂ ಕೋರ್ಟ್ ದಿಲ್ಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದು, ತನ್ನದೇ ಹಿಂದಿನ ತೀರ್ಪನ್ನು ಪಕ್ಕಕ್ಕೆ ಸರಿಸಿದಾಗ ಅವರಿಬ್ಬರ ಹೋರಾಟಕ್ಕೆ ಅರ್ಥ ಬಂದಿತ್ತು. ಇದೀಗ ಅವರು ದಂಪತಿಯಾಗಿದ್ದಾರೆ. ಸಲಿಂಗಿ ಗಳಾಗಿಯೇ ಇರುವವರಿಗೆ ಇದೊಂದು ಪ್ರೋತ್ಸಾಹ ದಾಯಕವಾಗಿರುತ್ತದೆ ಎನ್ನುವುದು ಅವರ ಅಂಬೋಣ.
ಅರುಂಧತಿ ಕಾಟ್ಜು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ. ಮಾರ್ಕಂಡೇಯ ಕಾಟ್ಜು ಅವರ ಸೋದರ ಸಂಬಂಧಿ. ಇನ್ನು ಮೇನಕಾ ಗುರುಸ್ವಾಮಿ ಖ್ಯಾತ ರಾಜಕೀಯ ಚಿಂತಕ, ವಿಶ್ಲೇಷಕ ಮೋಹನ್ ಗುರುಸ್ವಾಮಿ ಅವರ ಪುತ್ರಿಯಾಗಿದ್ದಾರೆ.