Advertisement

ಹೀಗೂ ಉಂಟೆ; ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿಗೆ ವಿಚಿತ್ರ ಶಿಕ್ಷೆ ವಿಧಿಸಿದ ನ್ಯಾಯಾಧೀಶರು

01:31 PM Sep 24, 2021 | Team Udayavani |

ಪಾಟ್ನಾ: ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ ಆರೋಪಿಗೆ ಬಿಹಾರದ ಮಧುಬನಿ ಕೋರ್ಟ್ ಹುಬ್ಬೇರಿಸುವಂತಹ ವಿಚಿತ್ರ ಶಿಕ್ಷೆಯನ್ನು ವಿಧಿಸಿ, ಜಾಮೀನು ಮಂಜೂರು ಮಾಡಿದೆ. ಅತ್ಯಾಚಾರ ಎಸಗಲು ಯತ್ನಿಸಿರುವ ಆರೋಪಿ ಆರು ತಿಂಗಳ ಕಾಲ ಇಡೀ ಗ್ರಾಮದ ಎಲ್ಲಾ ಮಹಿಳೆಯರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿ ಕೊಡಬೇಕೆಂದು ನ್ಯಾಯಾಧೀಶರು ಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ಜಂಜಾರ್ಪುರ್ ನ್ಯಾಯಾಲಯದ ಎಡಿಜೆ ಅವಿನಾಶ್ ಕುಮಾರ್ ಅವರು, ಆರೋಪಿ ಲಾಲನ್ ಕುಮಾರ್ ಶಫಿಗೆ ಸಂತ್ರಸ್ತೆ ಮಹಿಳೆ ಸೇರಿದಂತೆ ಇಡೀ ಗ್ರಾಮದ ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆದು ಕೊಡಬೇಕೆಂಬ ಷರತ್ತಿನ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.

20 ವರ್ಷದ ಆರೋಪಿ ಶಫಿ ಬಟ್ಟೆ ತೊಳೆಯುವ ವೃತ್ತಿ ಮಾಡುತ್ತಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪದಲ್ಲಿ ಏಪ್ರಿಲ್ ನಲ್ಲಿ ಪೊಲೀಸರು ಬಂಧಿಸಿದ್ದರು. ಈತ ಯುವಕನಾಗಿದ್ದು, ಆತನನ್ನು ಕ್ಷಮಿಸಬೇಕೆಂದು ವಕೀಲರು ಈತನ ಪರ ವಾದಿಸಿದ್ದರು. ತನ್ನ ವೃತ್ತಿಯ ಮೂಲಕ ಸಮಾಜದಲ್ಲಿ ಸೇವೆ ಮಾಡುವ ಇಚ್ಛೆಯನ್ನೂ ತನ್ನ ಕಕ್ಷಿದಾರ ಹೊಂದಿರುವುದಾಗಿ ವಕೀಲರು ಕೋರ್ಟ್ ಗೆ ತಿಳಿಸಿದ್ದರು. ಬಳಿಕ ನ್ಯಾಯಾಧೀಶರು ಇಡೀ ಗ್ರಾಮದ ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆದು ಕೊಡುವಂತೆ ಷರತ್ತು ವಿಧಿಸಿ ಜಾಮೀನು ನೀಡಿದ್ದರು.

ಬಟ್ಟೆಯನ್ನು ತೊಳೆಯುವುದು ಹಾಗೂ ಇಸ್ತ್ರಿ ಹಾಕಿ ಕೊಡುವುದು ಸೇರಿದಂತೆ ಆರೋಪಿ ತಲಾ 10,000 ರೂಪಾಯಿ ಮೊತ್ತದ ಎರಡು ಭದ್ರತೆಯನ್ನು ನೀಡುವಂತೆ ಕೋರ್ಟ್ ಆರೋಪಿ ಶಫಿಗೆ ತಿಳಿಸಿದೆ. ಆರು ತಿಂಗಳ ಬಳಿಕ ಈತನ ಉಚಿತ ಸೇವೆಯ ಬಗ್ಗೆ ಗ್ರಾಮದ ಮುಖ್ಯಸ್ಥ ಅಥವಾ ಯಾವುದೇ ಸರ್ಕಾರಿ ಅಧಿಕಾರಿ ನೀಡುವ ಪ್ರಮಾಣಪತ್ರವನ್ನು ಕೋರ್ಟ್ ಗೆ ಹಾಜರುಪಡಿಸಬೇಕು ಎಂದು ನಿರ್ದೇಶನ ನೀಡಿದೆ.

ಜಂಜಾರ್ಪುರ್ ನ್ಯಾಯಾಲಯದ ಎಡಿಜೆ ಅವಿನಾಶ್ ಕುಮಾರ್ ಅವರು ಈ ಹಿಂದೆಯೂ ಇಂತಹ ವಿಲಕ್ಷಣ ರೀತಿಯ ಆದೇಶಗಳನ್ನು ನೀಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಶಾಲೆಯನ್ನು ತೆರೆದಿದ್ದ ಆರೋಪ ಎದುರಿಸಿದ್ದ ಶಿಕ್ಷಕಿಯೊಬ್ಬರಿಗೆ ಇಡೀ ಗ್ರಾಮದ ಮಕ್ಕಳಿಗೆ ಉಚಿತವಾಗಿ ಪಾಠ ಕಲಿಸುವಂತೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next