Advertisement

ಶ್ರೀಲಂಕಾದಲ್ಲೀಗ ಪಾಸ್‌ ಇದ್ದರಷ್ಟೇ ತೈಲ! ಸರ್ಕಾರ ಕೊಡುವ ಕ್ಯುಆರ್‌ ಕೋಡ್‌ ತೋರಿಸಿದರೆ ಸಾಕು

10:14 AM Jul 17, 2022 | Team Udayavani |

ಕೊಲೊಂಬೋ: ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಈಗ ಸಾರ್ವಜನಿಕರಿಗೆ “ರಾಷ್ಟ್ರೀಯ ತೈಲ ಪಾಸ್‌’ ವಿತರಣೆ ಕಾನೂನು ಜಾರಿಗೆ ಬಂದಿದೆ. ದೇಶಾದ್ಯಂತ ತೈಲದ ತೀವ್ರ ಅಭಾವ ಎದುರಾಗಿರುವ ಕಾರಣ ನೂತನ ಇಂಧನ ನೀತಿಯನ್ನು ಘೋಷಿಸಲಾಗಿದೆ.

Advertisement

ಅದರಂತೆ, ಈ ಪಾಸ್‌ ಹೊಂದಿದ ನಾಗರಿಕರಿಗೆ ವಾರಕ್ಕೆ ಇಂತಿಷ್ಟು ತೈಲ ಎಂದು ನಿಗದಿಪಡಿಸಲಾಗುತ್ತದೆ.

ಪ್ರತಿ ವಾಹನದ ಚಾಸಿಸ್‌ ಸಂಖ್ಯೆ ಮತ್ತು ವಿವರಗಳು ದೃಢೀಕರಣಗೊಂಡ ಕೂಡಲೇ ಕ್ಯುಆರ್‌ ಕೋಡ್‌ ವಿತರಿಸಲಾಗುತ್ತದೆ. ಜನರು ಈ ಕೋಡ್‌ ಬಳಸಿಕೊಂಡು ವಾರಕ್ಕೆ 2 ಬಾರಿ ತಮ್ಮ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ಆಯಾ ವಾಹನದ ನಂಬರ್‌ಪ್ಲೇಟ್‌ನ ಕೊನೆಯ ಸಂಖ್ಯೆಯ ಆಧಾರದಲ್ಲಿ ವಾರದ ಯಾವ ದಿನ ಇಂಧನ ತುಂಬಿಸಿಕೊಳ್ಳಬೇಕು ಎಂಬುದನ್ನೂ ಸರ್ಕಾರವೇ ನಿಗದಿಪಡಿಸಿದೆ. ತೈಲಕ್ಕಾಗಿ ಸರತಿ ಸಾಲಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಅಧ್ಯಕ್ಷರ ರೇಸ್‌ನಲ್ಲಿ ನಾಲ್ವರು
ಗೋಟಬಯಾ ಉತ್ತರಾಧಿಕಾರಿ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೇರಲು ಹಂಗಾಮಿ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ, ಪ್ರತಿಪಕ್ಷ ನಾಯಕ ಸಜಿತ್‌ ಪ್ರೇಮದಾಸ, ಮಾರ್ಕ್ಸಿಸ್ಟ್‌ ಜೆವಿಪಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಮತ್ತು ದಲ್ಲಾಸ್‌ ಅಲಹಪ್ಪೆರುಮಾ ಅವರು ರೇಸ್‌ನಲ್ಲಿದ್ದಾರೆ. ಇದೇ 20ರಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

ದೇಶಕ್ಕಾಗಿ ಹಣ ರವಾನೆ
ಆರ್ಥಿಕ ಬಿಕ್ಕಟ್ಟಿನಲ್ಲಿರುವ ದೇಶಕ್ಕೆ ನೆರವಾಗಲು ಈಗ ವಿದೇಶಗಳಲ್ಲಿರುವ ಲಂಕನ್ನರೇ ಮುಂದೆ ಬಂದಿದ್ದಾರೆ. ತಮ್ಮ ದೇಶ ಉಳಿಯಬೇಕು ಎಂಬ ಉದ್ದೇಶದಿಂದ ಡಾಲರ್‌ಗಳನ್ನು ರವಾನಿಸಲು ಆರಂಭಿಸಿದ್ದಾರೆ.

Advertisement

“ದಯವಿಟ್ಟು ಕಾನೂನಾತ್ಮಕ, ಅಧಿಕೃತ ಬ್ಯಾಂಕಿಂಗ್‌ ಮಾಧ್ಯಮಗಳ ಮೂಲಕ ಡಾಲರ್‌ಗಳನ್ನು ಕಳುಹಿಸಿ’ ಎಂದು ವಿದೇಶದಲ್ಲಿರುವ ಲಂಕನ್ನರಿಗೆ ಶ್ರೀಲಂಕಾದ ಸೆಂಟ್ರಲ್‌ ಬ್ಯಾಂಕ್‌ ಮನವಿ ಮಾಡಿದ ಬೆನ್ನಲ್ಲೇ, ಟ್ವಿಟರ್‌ನಲ್ಲಿ “ಶ್ರೀಲಂಕಾ ಡಾಲರ್‌ ಚಾಲೆಂಜ್‌’ ಟ್ರೆಂಡ್‌ ಆಗಿದೆ.

ಈಗ ಹಲವರು “ಡೆಪಾಸಿಟ್‌ ಸ್ಲಿಪ್‌’ಗಳ ಫೋಟೋಗಳನ್ನು ಅಪ್‌ಲೋಡ್‌ ಮಾಡಿ, ಹಣ ರವಾನಿಸಿದ್ದಾಗಿ ಹೇಳಿದ್ದಾರೆ. ತಾಯ್ನಾಡಿನ ಉಳಿವಿಗಾಗಿ ಏನು ಬೇಕಿದ್ದರೂ ಮಾಡುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next