ಬೀಜಿಂಗ್ : ಸಿಕ್ಕಿಂ ಗಡಿಯಲ್ಲಿನ ಚೀನಕ್ಕೆ ಸಡ್ಡು ಹೊಡೆದು ಭಾರತ ತನ್ನ ಸೇನೆಯನ್ನು ಗಮನಾರ್ಹವಾಗಿ ಹೆಚ್ಚಿಸಿರುವುದನ್ನು ಕಂಡು ಪರಿಸ್ಥಿತಿ ಯುದ್ಧದಂತಹ ಸ್ಥಿತಿಗೆ ತಿರುಗುವುದನ್ನು ತಪ್ಪಿಸಲು ಬೀಜಿಂಗ್ ಇಂದು ಸೋಮವಾರ ಡೋಕ್ ಲಾ ಪ್ರದೇಶದಿಂದ ತನ್ನ ಸೇನೆಯನ್ನು ಹಿಂದೆಗೆದುಕೊಂಡಿದೆ. ಮಾತ್ರವಲ್ಲ ಭಾರತಕ್ಕೂ ತನ್ನ ಸೇನೆಯನ್ನು ಹಿಂದೆಗೆದುಕೊಳ್ಳುವಂತೆ ತಾಕೀತು ಮಾಡಿದೆ.
1962ರ ಬಳಿಕ ಉಭಯ ದೇಶಗಳ ನಡುವೆ ಗಡಿಯಲ್ಲಿ ಕಂಡುಬಂದಿರುವ ಅತೀ ದೊಡ್ಡ ಬಿಕ್ಟಟ್ಟು ಇದಾಗಿದ್ದು ಪರಿಣಾಮವಾಗಿ ಸಿಕ್ಕಿಂ ಗಡಿಯಲ್ಲಿ ಯುದ್ಧದ ಕಾರ್ಮೋಡಗಳು ಕವಿದಂತೆ ಕಂಡುಬಂದಿತ್ತು.
ಡೋಕ್ ಲಾ ಪ್ರದೇಶದಲ್ಲಿ ಚೀನ ನಿರ್ಮಿಸುತ್ತಿರುವ ರಸ್ತೆಯು ತನ್ನ ಭದ್ರತೆಗೆ ಒದಗಿರುವ ಗಂಭೀರ ಅಪಾಯವೆಂದು ಭಾರತ ಹೇಳುವುದು ಸರಿಯಲ್ಲ ಎಂದು ಬೀಜಿಂಗ್ ಉನ್ನತಾಧಿಕಾರಿಗಳು ಹೇಳಿದ್ದು, ಹೊಸದಿಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಅಭಿವೃದ್ಧಿಪಡಿಸುವ ಒಮ್ಮತದಿಂದ ದೂರ ಸರಿಯಕೂಡದು ಎಂದು ಹೇಳುವ ಮೂಲಕ ಭಾರತದೊಂದಿಗಿನ ಸಂಘರ್ಷವನ್ನು ತಗ್ಗಿಸುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ.
ಸಿಕ್ಕಿಂ ಗಡಿ ಬಿಕ್ಕಟ್ಟನ್ನು ನಿವಾರಿಸಲು ಭಾರತ ಈಗಿನ್ನು ತನ್ನ ಸೇನೆಯನ್ನು ಡೋಕ್ ಲಾ ಪ್ರದೇಶದಿಂದ ಹಿಂದೆಗೆಯಬೇಕು ಎಂದು ಹೇಳಿರುವ ಚೀನದ ಸರಕಾರಿ ಒಡೆತನದ ಕ್ಸಿನ್ ಹುವಾ ಸುದ್ದಿ ಸಂಸ್ಥೆ, “ಸಿಕ್ಕಿಂ ವಲಯದಲ್ಲಿನ ಭಾರತ – ಚೀನ ಗಡಿಯನ್ನು 1890ರಷ್ಟು ಹಿಂದೆಯೇ ಚೀನ – ಬ್ರಿಟಿಷ್ ಒಪ್ಪಂದದಡಿ ಗುರುತಿಸಲಾಗಿತ್ತು’ ಎಂದು ಹೇಳಿದೆ.
ಕಳೆದೊಂದು ತಿಂಗಳಿನಿಂದಲೂ ಸಿಕ್ಕಿಂನ ಗಡಿಯಲ್ಲಿ ಚೀನ ಸೇನೆ ಹಾಗೂ ಭಾರತೀಯ ಸೇನಾ ಪಡೆಗಳ ನಡುವೆ ಒಂದಲ್ಲ ಒಂದು ಸಂಘರ್ಷ ನಡೆಯುತ್ತಲೇ ಇದ್ದು, ಕಳೆದ ವಾರ ಚೀನ ಸೇನೆ ಭಾರತೀಯ ಬಂಕರ್‌ಗಳನ್ನು ನಾಶಪಡಿಸಿ, ಯೋಧರೊಂದಿಗೆ ತಳ್ಳಾಟವನ್ನೂ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಈ ನಡುವೆ ಭಾರತದ ಈ ಕ್ರಮದ ಬೆನ್ನಿಗೆ ಚೀನ ಕೂಡ ಆಕ್ರಮಣಶೀಲ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಮೂಲಗಳು ತಿಳಿಸಿದ್ದವು.
ಉತ್ತರ ಬಂಗಾಲದ ಸುಕ್ನಾದಲ್ಲಿನ 33 ಕಾರ್ಪ್‌ಗಳ ಪ್ರಧಾನ ನೆಲೆಯಲ್ಲಿ ದಾಳಿ ನಡೆಸಬಹು ದಾದ ಹಿನ್ನೆಲೆಯಲ್ಲಿ ಅಲ್ಲಿಯೂ ಸೇನಾ ಪಡೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜೂ. 8ರಂದು ಬ್ರಿಗೇಡ್ ಪ್ರಧಾನ ನೆಲೆಯಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸ ಲಾಗಿತ್ತು. ಈ ವೇಳೆಯೂ ಘರ್ಷಣೆ ನಡೆದಿದ್ದು, ಉಭಯ ರಾಷ್ಟ್ರಗಳ ಸೇನಾ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಹೇಳಲಾಗಿತ್ತು.