Advertisement

ಬ್ರೆಜಿಲ್‌ ಕಾರಾಗೃಹದಲ್ಲಿ ಭುಗಿಲೆದ್ದ ಪ್ರತಿಭಟನೆ

04:31 PM Apr 28, 2020 | sudhir |

ಉದ್ವಿಗ್ನಗೊಂಡ ಕೈದಿಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಇಲಾಖೆಯ ಅಧಿಕಾರಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಕುರಿತಂತೆ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕೈದಿಗಳು ತಮಗೆ ಆರೋಗ್ಯ ಸವಲತ್ತು ಸೇರಿದಂತೆ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾರಾಗೃಹದ ಕಾವಲುಗಾರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

Advertisement

ರಿಯೊ ಡಿ ಜನೈರೊ: ಸೋಂಕಿನ ಬಾಯಿಗೆ ವಿಶ್ವದ್ಯಾಂತ ಕಾರಾಗೃಹಗಳೂ ಆಹಾರವಾಗುತ್ತಿವೆ. ಇದೇ ಕಾರಣಕ್ಕಾಗಿ ಬ್ರೆಜಿಲಿನ ಕಾರಾಗೃಹಗಳಲ್ಲಿ ದಂಗೆಯ ಕಿಚ್ಚು ಎದ್ದಿದ್ದು, ಸಾವಿರಾರು ಕೈದಿಗಳು ಸುರಕ್ಷತೆ ಒದಗಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಗಳು ಸಾವಿರಾರು ಕೈದಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬ್ರೆಜಿಲ್‌ನಲ್ಲಿ ಪ್ರಸ್ತುತ ಜೈಲುಗಳು ತುಂಬಿ ತುಳುಕುತ್ತಿವೆ. ಮೊದಲೇ ಸ್ವತ್ಛತೆ ಇಲ್ಲದೇ, ಜನದಟ್ಟಣೆಯೂ ಹೆಚ್ಚಿತ್ತು. ಇಂತ ಕಾರಾಗೃಹಗಳಲ್ಲಿ ಸೋಂಕು ಪಸರಿಸುತ್ತಿರುವುದು ದೊಡ್ಡ ತಲೆನೋವಾಗಿದೆ. ಜತೆಗೆ ಕೈದಿಗಳನ್ನು ಸ್ಥಳಾಂತರಿಸಲು ಪರ್ಯಾಯ ಮಾರ್ಗವಿಲ್ಲದೇ ಪರದಾಡುತ್ತಿದ್ದ ಅಧಿಕಾರಿಗಳಿಗೆ ಈಗ ಪ್ರತಿಭಟನೆ ಹತ್ತಿಕ್ಕುವುದೇ ದೊಡ್ಡ ಸವಾಲಾಗಿದೆ.

ಇದೇ ವಿಷಯದ ಸಲುವಾಗಿ ಕೊಲಂಬಿಯಾದ ಕಾರಾಗೃಹದಲ್ಲೂ ಕಳೆದ ತಿಂಗಳು ಕಲಹ ನಡೆದಿದ್ದು, ಗಲಭೆಯಲ್ಲಿ 23 ಕೈದಿಗಳು ಸಾವನ್ನಪ್ಪಿದ್ದರು. ಇದೀಗ ಈ ಕಿಡಿ ಇಡೀ ಬ್ರೆಜಿಲ್‌ನಾದ್ಯಂತ ಸೋಂಕಿಗಿಂತ ವೇಗವಾಗಿ ಹರಡುತ್ತಿದೆ.

ಶುಕ್ರವಾರ ಬ್ಯೂನಸ್‌ ಕಾರಾಗೃಹದಲ್ಲಿ ನಡೆದ ಗಲಭೆಯಲ್ಲಿ ಕೈದಿಗಳು ಸತತ 9 ಗಂಟೆಗಳ ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲಿನ ಹಾಸಿಗೆಗಳಿಗೆ ಬೆಂಕಿ ಹಚ್ಚಿ , ನಾವು ಜೈಲಿನಲ್ಲೇ ಸಾಯಲು ಇಷ್ಟ ಪಡುವುದಿಲ್ಲ ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ವಿಶ್ವಸಂಸ್ಥೆ ತಜ್ಞರು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಇಲಾಖೆಗೆ ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಹುಡುಕುವಂತೆೆ ಸೂಚಿಸಿದ್ದು, ಮಾನವ ಹಕ್ಕುಗಳ ಕಾರ್ಯಕರ್ತರು ಕೈದಿಗಳನ್ನು ಸ್ಥಳಾಂತರಗೊಳಿಸಿ ಅಥವಾ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಆದರೆ ಸೋಂಕು ನಿಯಂತ್ರಣಕ್ಕಾಗಿ ನಾವು ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಯಾವುದೇ ಕೈದಿಯ ಸಂಬಂಧಿಗಳು, ವಕೀಲರು ಮತ್ತಿತ್ತರ ಹೊರಗಿನ ಜನರ ಪ್ರವೇಶಾತಿ ಮೇಲೆ ನಿರ್ಬಂಧ ಹೇರಲಾಗಿದೆ. ಕಾರಾಗೃಹಕ್ಕೆ ಬರುವ ಹೊಸ ಅಪರಾಧಿಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತಿದೆ ಎಂದಿದ್ದಾರೆ ಅಧಿಕಾರಿಗಳು. ಬ್ರೆಜಿಲ್‌ನಲ್ಲಿ 63, 100 ಸೋಂಕು ಪ್ರಕರಣ ಪತ್ತೆಯಾಗಿದ್ದು, 4, 286 ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next