ಚೆನ್ನೈ/ಪಾಟ್ನಾ:ಒಂದು ಕಡೆ ಕಾಂಗ್ರೆಸ್ “ಕುಟುಂಬ ರಾಜಕಾರಣ’ದಿಂದ ಹೊರಬರುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದು ಕಡೆ ಡಿಎಂಕೆ ಮತ್ತು ಆರ್‌ಜೆಡಿ “ಫ್ಯಾಮಿಲಿ ರಾಜ್’ನ ಹಿಡಿತವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಂಡಿವೆ.
ಭಾನುವಾರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಮತ್ತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನೇ ಪಕ್ಷದ ಅಧ್ಯಕ್ಷರೆಂದು ಘೋಷಿಸಿದೆ.
ಅತ್ತ, ಬಿಹಾರದ ಆರ್‌ಜೆಡಿ ಕೂಡ, ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಿದೆ.
ನವದೆಹಲಿಯಲ್ಲಿ ಭಾನುವಾರ ನಡೆದ ಆರ್‌ಜೆಡಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸತತ 12ನೇ ಬಾರಿಗೆ ಲಾಲು ಅವರೇ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ, ಚೆನ್ನೈನಲ್ಲಿ ನಡೆದ ಡಿಎಂಕೆಯ ಜನರಲ್ ಕೌನ್ಸಿಲ್ ಸಭೆಯಲ್ಲಿ 2ನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೇರಿದ ಬಳಿಕ ಮಾತನಾಡಿದ ಸ್ಟಾಲಿನ್, “2024ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಎಲ್ಲ ಪದಾಧಿಕಾರಿಗಳೂ ಶಪಥ ಮಾಡಬೇಕು.
ರಾಷ್ಟ್ರರಾಜಕಾರಣದಲ್ಲಿ ಡಿಎಂಕೆಯನ್ನು ಅಭೇದ್ಯ ಶಕ್ತಿಯನ್ನಾಗಿ ರೂಪಿಸಬೇಕು’ ಎಂದು ಕರೆ ನೀಡಿದ್ದಾರೆ.