“”ಲಗೂನ ಮನಿಗಿ ಬಾ”
ಸಂಜೆ ನಾಲ್ಕರ ಸುಮಾರಿಗೆ ಅವರ ಮನೆಗೆ ಹೋದ. ಬರೆಯುತ್ತ ಕುಳಿತಿದ್ದ ಪ್ರೊಫೆಸರ್ ಎದ್ದು ಬಂದು ಬಾಗಿಲು ತೆರೆದರು. ಏನೋ ಸೆಮಿನಾರ್ ಗಿಮಿನಾರ್ ಇರಬೇಕು, ಪ್ರಸಂಟೇಶನ್ ಸಿದ್ಧ ಮಾಡಿಕೊಡಲು ಕರೆದಿರಬೇಕು ಎಂದುಕೊಂಡ.
Advertisement
“”ಹೋದ ಸರ್ತಿ ಧೊಲಾವೀರಾದಾಗ ಉತ್ಖನನ ಮಾಡಾಕ ಹತ್ಯಾರ ಅಂತ ಹೋಗಿ ನೋಡಿ ಬಂದಿದ್ನಲ್ಲ, ಅಲ್ಲಿ ಈ ಸಲನೂ ಡಿಸೆಂಬರ್ ಕೊನೇ ವಾರದಿಂದ ಮಾರ್ಚಿ ತನಾ ಮಾಡ್ತಾರಂತ, ಸ್ವಲ್ಪ ತಡ ಆಗೇದಂತ. ಮುಗುಸುದೂನು ತಡ ಆಗ್ತದ ಕಾಣ್ತದ. ಅಲ್ಲಿ ಮದ್ಲಿಂದ ಉತ್ಖನನ ಮಾಡಾಕ ಹತ್ತಿದವರು ಡಾಕ್ಟರ್ ಮಿರ್ಜಾನೆ ಅಂತ. ಅವರ ಗುಂಪಲ್ಲಿ ಈ ಸರ್ತಿ ಒಬ್ರಿಗಿ ಭಾಗವಹಿಸಕ್ಕೆ ಆಗಂಗಿಲ್ಲಂತ. ಈ ಸರ್ತಿದು ಭಾಳ ಮಹತ್ವದ್ದಂತ, ಮಿರ್ಜಾನೆಗೆ ಪಿಎಚ್‌ಡಿ ಆಗಿರೋ ಅಸಿಸ್ಟಂಟ್ ಒಬ್ರು ಬೇಕಂತಪಾ. ಮಧ್ಯಾಹ್ನ ಫೋನ್ ಮಾಡಿದ್ರು, ನಿಮ್ಮ ಸ್ಟೂಡೆಂಟ್ಸ್ ಯಾರಾರ ಅದಾರೇನು ಅಂತ. ನಾ ಫಟ್ ಅಂತ ನಿನ್ನ ಹೆಸರು ಹೇಳಿದೆ. ಹೊಕ್ಕೀಯೇನು ಹ್ಯಂಗ ನೋಡು, ಛಲೋ ಅವಕಾಶ, ನಿಮ್ಮ ಕಾಲೇಜಿಗೆ ನಾ ಹೇಳ್ತೀನೇಳು… ಆದರ ಸುಮಾರು ಮೂರು ತಿಂಗಳು ಅಲ್ಲೇ ಕ್ಯಾಂಪ್‌ನಾಗ ಇರಬಕು, ಆ ಕಡಿ ಈ ಕಡಿ ಅಲ್ಲಾಡೂ ಹಂಗಿಲ್ಲ…”
“”ಇಲ್ಲಿದ್ದಾದರೂ ಏನು ಮಹಾ ಮಾಡ್ತೀನಿ. ಹೋದರೆ ಹ್ಯಾಗೆ. ಆದರೆ, ಮೂರು ತಿಂಗಳ ಕಾಲ ಉತ್ಖನನ, ಅಪಾರ ಸಹನೆಯನ್ನು ಬೇಡುವಂತಹುದು. ತುಸು ಸಮಯ ಈ ಎಲ್ಲದರಿಂದ ದೂರ… ಅರೆ ಹೌದು… ಬಹುಶಃ ಹಳಹಳಿಕೆಗಳಿಂದ ಕಳಚಿಕೊಳ್ಳಲು ನನಗೂ ಈ ದೂರ ಒಳ್ಳೆಯದೇನೋ. ಮತ್ತೆ ಇದು ಮಹತ್ವದ ಉತ್ಖನನ, ಹರಪ್ಪ ಕಾಲದ ಬಗ್ಗೆ ಹೆಚ್ಚು ಆಳವಾಗಿ ತಿಳಿದುಕೊಳ್ಳಬಹುದು. ಜೊತೆಗೆ ನನ್ನ ದೃಷ್ಟಿಕೋನಗಳನ್ನು ಗಟ್ಟಿಗೊಳಿಸಿಕೊಳ್ಳಲಿಕ್ಕೂ ಸಹಾಯವಾಗಬಹುದು” ಮಹೇಶ ಅವರ ಮಾತನ್ನು ಕೇಳಿಸಿಕೊಳ್ಳುತ್ತಲೇ ತನ್ನೊಳಗೇ ವಿಚಾರ ನಡೆಸಿದ್ದ. “”ನೋಡಪಾ, ಕೆಲವು ಅವಕಾಶ ಹ್ಯಾಂಗ ಬರ್ತದ ಅಂದ್ರ ಆ ಸಮಯ ನಮಗನ ಕಾದುಕೊಂಡದ ಅನ್ನೂ ಹಂಗ. ನೀ ಹ್ವಾದ್ರ ಛಲೋ ಆಕೈತಿ ಅಂತ ಅನಿಸ್ತದ, ನಿನ್ನ ವೃತ್ತಿ ದೃಷ್ಟಿಯಿಂದಲೂ ಒಳ್ಳೇದು. ಮತ್ತ…” ಮಾತು ಅರ್ಧಕ್ಕೆ ನಿಲ್ಲಿಸಿ ಎದ್ದು ಬಂದು ಅವನ ಭುಜ ತಟ್ಟಿದರು.
Related Articles
Advertisement
“”ಇರಪ್ಪ , ಚಾಪೆ ಹಾಸ್ತೀನಿ. ಕೆಳಗೆ ಆರಾಮಾಗಿ ಕುತ್ತು ಇವೆಲ್ಲ ಜರಾ ನೋಡೂಣು” ಪ್ರೊಫೆಸರ್ ಚಾಪೆ ಹಾಸಿದವರು, ಅದರ ಮೇಲೊಂದು ಕೌದಿಯನ್ನು ಹಾಸಿದರು. ಆ ಕೌದಿ ಪದ್ದಜ್ಜಿ ಹಾಕಿದ್ದು. ಪದ್ದಜ್ಜಿಯ ಕೈಬೆರಳ ಬಿಸುಪನ್ನು ಅಂಟಿಸಿಕೊಂಡ ಇನ್ನೂ ಎರಡು ಕೌದಿಗಳು ಮನೆಯಲ್ಲಿದ್ದವು. ಪ್ರೊಫೆಸರ್ ಹೆಂಡತಿ ಯಾಕೋ ಈ ಕೌದಿಗಳನ್ನು ಕಂಡರೆ ಕಿರಿಕಿರಿಗೊಳ್ಳುತ್ತಿದ್ದರು. ಪಕ್ಕದ ಮನೆಯವರೊಬ್ಬರು ಭಾಳ ಕೇಳಿಕೊಂಡರು ಎಂದು ಪದ್ದಜ್ಜಿ ಅವರಿಗೂ ಒಂದು ಕೌದಿ ಮಾಡಿಕೊಟ್ಟಿದ್ದರು. ಅವರು ಇಲ್ಲಿಂದ ವರ್ಗಾವಣೆಗೊಂಡು ಬೇರೆ ಊರಿಗೆ ಹೋದ ನಂತರವೂ ಪದ್ದಜ್ಜಿಯ ಕೌದಿ ನೆನಪಿಸಿಕೊಂಡು ಒಂದೆರಡು ಬಾರಿ ಫೋನ್ ಮಾಡಿದ್ದರು. ಪ್ರೊಫೆಸರ್ ಹೆಂಡತಿಗೆ ಮಾತ್ರ ಕೌದಿ ಬಗ್ಗೆ ಯಾಕಿಂಥ ವಿನಾಕಾರಣ ಅಸಹನೆ ಎಂದು ಮಹೇಶನಿಗೆ ಅರ್ಥವಾಗಿರಲಿಲ್ಲ. ಅದರಲ್ಲಿಯೂ ಈ ಹೊಸಮನೆಗೆ ಬಂದ ಮೇಲೆ ಪ್ರೊಫೆಸರ್ ಅವನ್ನು ತೆಗೆದರೆ ಸಾಕು, “ಆ ಹಳೇ ಕೌದಿ ಏನು ಹಾಸೀ¤ರಿ?’ ಎಂದು ಅದನ್ನು ವಾಪಸು ತೆಗೆದಿಡುವವರೆಗೂ ಗೊಣಗುತ್ತಿದ್ದರು. ಪದ್ದಜ್ಜಿ ಅದಕ್ಕೂ ಆಕ್ಷೇಪಿಸದೇ, ಒತ್ತಾಯಿಸದೇ ಸುಮ್ಮನಾಗಿದ್ದರು.
ಧೊಲಾವೀರಾದ ಬಗ್ಗೆ ಪ್ರೊಫೆಸರ್ ಹತ್ತಿರ ಇದ್ದ ಎಲ್ಲ ವಿವರಗಳನ್ನು ಹರಡಿಕೊಂಡು ಇಬ್ಬರೂ ಕುಳಿತರು. ಇನ್ನು ಈ ರಾತ್ರಿ ಇಲ್ಲಿಯೇ ಉಳಿಯಲು ಪ್ರೊಫೆಸರ್ ಹೇಳ್ತಾರೆ ಎಂಬ ಮಹೇಶನ ಅನಿಸಿಕೆ ನಿಜವಾಗುವಂತೆ ಸೀತಮ್ಮ, “”ಅಡಗಿ ಏನು ಮಾಡ್ಯಾರ ನೋಡು… ಸಾಲದಿದ್ದರ ಒಂದೀಟು ಅನ್ನಕ್ಕ ಇಡೂಣು” ಎಂದರು. ಊಟ ಮಾಡಿ ಮಲಗುವ ಮೊದಲು ಎಂದೂ ಇಲ್ಲದೇ “”ಮ್ಯಾಲ ಟೆರೇಸಿನಾಗ ಜರಾ ಕೂಡೂಣೇನು” ಎಂದರು. ಮಹೇಶ ಚಾಪೆ ಮತ್ತು ಕೌದಿಯನ್ನು ಎತ್ತಿಕೊಂಡು ಅವರ ಹಿಂದೆ ಮೆಟ್ಟಿಲೇರಿದ.
ಸ್ವಲ್ಪ ಹೊತ್ತು ತಮ್ಮ, ಮಿರ್ಜಾನೆಯ ಪರಿಚಯದ ಬಗ್ಗೆ ಹೇಳಿದರು. “”ತುಂಬ ಓದಿಕೊಂಡಿರುವ ಅವನು ಸ್ವಲ್ಪ ವಿಲಕ್ಷಣ ಅಂತ ಕೆಲವರಿಗೆ ಅನ್ನಿಸಬಹುದು, ಏನೇ ಇದ್ದರೂ ಆತ ಕಷ್ಟಪಟ್ಟು ಕೆಲಸ ಮಾಡಾಂವ” ಎಂದು ತಮಗೆ ಅನ್ನಿಸಿದ್ದನ್ನು ಒತ್ತಿ ಹೇಳಿದರು. ಮಗ ಮತ್ತೆ ಮೇಲ್ ಮಾಡಿದರೂ ಈ ವಿಚಾರ ಏನೂ ಪ್ರಸ್ತಾಪ ಮಾಡಿಲ್ಲ, ಈ ಬಾರಿ ಬೇಸಿಗೆ ರಜೆಯಲ್ಲಿ ಬರ್ತಾರಂತೆ, ಸೊಸೆ ಮತ್ತೆ ಒಂದೆರಡು ಬಾರಿ ಈ ಬಗ್ಗೆ ಆಸ್ಥೆಯಿಂದ ವಿಚಾರಿಸಿಕೊಂಡಿದ್ದಾಳೆ ಎಂದೆಲ್ಲ ತಾವೇ ವಿವರಿಸುತ್ತ ಹೋದ ಪ್ರೊಫೆಸರ್ ಕಡೆಯಲ್ಲಿ ಮುಂದಿನ ತಿಂಗಳು ಜಲಜ, ಲೇಖಾ ಇಲ್ಲಿ ಬಂದಿರುವುದಾಗಿ ಹೇಳಿ ಒಮ್ಮೆ ನಿರಾಳವಾದಂತೆ ಉಸಿರು ಚೆಲ್ಲಿದರು. ಮಹೇಶ ಸುಮ್ಮನೆ “ಹಾಂ’, “ಹೂಂ’ ಅನ್ನುತ್ತ ಅವರ ಮಾತು ಕೇಳಿಸಿಕೊಳ್ಳುತ್ತಿದ್ದ.
“”ಈ ಮನಿ ನಾ ಸತ್ ಮ್ಯಾಗ ಮಗನಿಗೆ ಅಂತ ಅವಾಗೇ ವಿಲ್ ಮಾಡೀನಿ. ಅವಂಗೇನೂ ಹೇಳಿಲ್ಲ ಬಿಡು. ಮತ್ತ ಇನ್ನೊಂದು ಮದುವಿಯಾಗೂ ವಿಚಾರ ಈಗ್ಯಾಕ ಅಂತ ನನಗೆ ಅವ ಕೇಳೂದು ಈ ಆಸ್ತಿ ವಿಚಾರಕ್ಕೆ ಅಲ್ಲ ಅಂತ ನನಗ ಗೊತ್ತದ. ಅವನು, ಸೊಸಿನೂ ರಗಡ ದುಡೀತಾರ, ಅಲ್ಲೆ ಮನಿನೂ ಮಾಡ್ಯಾರ. ಇದಂತೂ ಅವನಿಗೇ ಇರ್ತದ. ಇನ್ನು ಮುಂದ ಲೇಖಾಗೆ ಏನರಾ ಜರಾ ಮಾಡಬಕು, ಏನಂತೀ ನೀ” ಮಹೇಶ ಈಗ ಮಾತನಾಡಲೇಬೇಕಾಯ್ತು.
“”ಮನಿ ವಿಚಾರ ಅವ್ರು ಮಾಡಿರಲಿಕ್ಕಿಲ್ಲ, ಅಷ್ಟು ಸಣ್ಣತನದ ಮನುಷ್ಯನಲ್ಲ ಅಂವ” ಎಂದವ ಮತೆ ಧ್ವನಿ ತಗ್ಗಿಸಿ, “”ಅಮ್ಮನ ಜಾಗದಲ್ಲಿ ಮತ್ತೂಂದು ಹೆಂಗಸನ್ನು ಕಲ್ಪನೆ ಮಾಡಿಕೊಳ್ಳೋದು ಮಕ್ಕಳಿಗೆ, ಎಷ್ಟೇ ದೊಡ್ಡೋರಾದ್ರೂ ಬಹುಶಃ ಎಲ್ಲೋ ಒಂದು ಕಡೆ ಮನಸ್ಸು ಒಪ್ಪಂಗಿಲ್ಲ ಕಾಣ್ತದ… ಈ ಸಲ ಬರ್ತಾರ ಅಂದ್ರಲ್ಲ, ಆವಾಗ ಜಲಜ ಮೇಡಂ, ಲೇಖಾ ಇಲ್ಲೇ ಇದ್ದರ, ನಾಕು ದಿನ ಒಟ್ಟಿಗಿದ್ದ ಮೇಲೆ ಮತ್ತ ಮನಸ್ಸು ಎಷ್ಟೋ ಬದಲಾಗ್ತದ, ಹೌದಿಲ್ರಿ” ಎಂದ.
“”ಅದೂ ಖರೇ ಅದ, ನೋಡೂಣು ಏನಾಗ್ತದ ಅಂತ. ನಾವೀಗ ಏನೇ ಊಹೆ ಮಾಡಿದ್ರೂನು ಆ ಸನ್ನಿವೇಶಗೋಳು ಎದುರಾಗೂ ಮುಂದ ಅವು ಬ್ಯಾರೇನೇ ಇರತಾವು ಹೌದಿಲ್ಲೋ” ಎನ್ನುತ್ತ ಮತ್ತೆ ವಿಚಾರಮಗ್ನರಾದರು. ಅಮವಾಸ್ಯೆ ಹತ್ತಿರ ಬರ್ತಿದೆಯೇನೋ ಎಷ್ಟೊಂದು ನಕ್ಷತ್ರಗಳಿವೆಯಲ್ಲ ಅನ್ನಿಸಿ, ಛೇ, ಈಗೀಗ ಕ್ಯಾಲೆಂಡರ್ ನೋಡಿದ್ರೂ ಹುಣ್ಣಿಮೆ-ಅಮವಾಸ್ಯೆ ಯಾವುದೂ ನೆನಪಿನಲ್ಲಿಯೇ ಇರೋದಿಲ್ಲ ಅಥವಾ ತಾನು ಅದನ್ನು ಸರಿಯಾಗಿ ನೋಡುವುದೂ ಇಲ್ಲವಲ್ಲ ಎಂದುಕೊಂಡ. ಅನು ನಿರಾಕರಿಸಿದ ಆರಂಭದ ನಾಲ್ಕಾರು ದಿನ ಹೃದಯವನ್ನು ಮೆತ್ತಗೆ ಬ್ಲೇಡಿನಿಂದ ಗೀರಿದ ಭಾವ ತೀವ್ರವಾಗಿ, ಹೃದಯದಿಂದ ನಿಜಕ್ಕೂ ರಕ್ತ ಒಸರಿಯೇಬಿಟ್ಟಿತು ಎಂಬಷ್ಟು ಯಾತನೆ ಅನ್ನಿಸುತ್ತಿತ್ತು. ಅವಳು ತನ್ನನ್ನು ನಿರಾಕರಿಸಿದ್ದರಿಂದ ಮೂಲೆಯಲ್ಲೆಲ್ಲೋ ತನ್ನ ಅಹಂಗೆ ಪೆಟ್ಟು ಬಿದ್ದಂತಾಗಿ ತನಗೆ ಇಷ್ಟು ಘಾಸಿಯಾಗಿದ್ದು ಎಂಬುದು ನಿಧಾನ ಅರಿವಿಗೆ ನಿಲುಕಿದಂತೆ, ಅದು ಎಂತಹ ಭ್ರಮೆ ಎನ್ನುವುದು ಗೊತ್ತಾಗುತ್ತಿದ್ದಂತೆ ನೋವಿನ ತೀವ್ರತೆ ಕ್ರಮೇಣ ಕಡಿಮೆಯಾಗುತ್ತ, ಅವಳ ನಿಶ್ಚಿತಾರ್ಥ ಆದ ನಂತರ ಹಾಗೆ ಯಾತನೆ ಕೂಡ ಅನ್ನಿಸುತ್ತಿಲ್ಲ. ಗಡಿಯಾರದ ಟಿಕ್‌ಟಕ್‌ಗೆ ಹೇಗೆ ಎಲ್ಲವನ್ನು ಮಾಯಿಸುವ ಶಕ್ತಿ ಇರುವುದಲ್ಲ ಎಂದು ಅಚ್ಚರಿಯೂ ಅನ್ನಿಸಿತು. ಬದುಕಿನಲ್ಲಿ ತನ್ನ ಹುಡುಕಾಟ ಕೂಡ ಬರೀ ಇದಷ್ಟೇ ಆಗಿರಲಿಲ್ಲ, ಇನ್ನೇನೋ ಇದೆ, ಬೇರೆ ಏನಾದರೂ ಮಾಡಬೇಕಿದೆ ಎನ್ನುವುದು ಇತ್ತೀಚಿಗೆ ತುಂಬ ಅನ್ನಿಸುತ್ತಿದೆ, ಆದರೆ ಏನು ಎಂದು ಸ್ಪಷ್ಟವಾಗುತ್ತಿಲ್ಲ.ಇವನು ಸುಮ್ಮನೆ ನಕ್ಷತ್ರ ನೋಡುತ್ತ ಕುಳಿತಿದ್ದನ್ನು ಕಂಡು ಪ್ರೊಫೆಸರ್ ಕೂಡ ಅರೆಗಳಿಗೆ ಸುಮ್ಮನಾದರು. ತುಸುಹೊತ್ತಿನ ನಂತರ ಮೆಲ್ಲಗೆ ಭುಜ ತಟ್ಟಿದರು. “”ಯಾಕೋ ಮಹೀ, ಬ್ಯಾಸರ ಆಗೇದೇನು… ಅದೆ ಮನಸ್ಸನಾಗ ಇಟ್ಕಬ್ಯಾಡೋ. ಆತು, ಇದು ಇಲ್ಲಿಗೆ ಮುಗೀತು ಅಂತೆØàಳಿ ಬದುಕಿನಾಗ ಮುಂದೆ ಸಾಗ್ತಲೇ ಇರಬೇಕಪಾ. ಗೊತ್ತದ ನನಗ, ಇವ್ಯಾವೂ ಬಾಯಿಮಾತು ಹೇಳೂವಷ್ಟು ಸರಳ ಇರೂದಿಲ್ಲ ಅಂತ. ಆದ್ರ ಮಹೀ, ಒಂದು ನೆನಪಿನಾಗ ಇಟ್ಕ. ಈ ಬದುಕು ಅನ್ನೂದು ಅದಲಾ, ಅದು ಒಂದು ಘಟನಾ, ಒಂದಿಷ್ಟು ಸನ್ನಿವೇಶಕ್ಕಿಂತ ಭಾಳಾ ಅಗಾಧ ಅದ. ಬದುಕು ಅಷ್ಟೇ ಅನಿಶ್ಚಿತನೂ ಅದ. ಯಾವಾಗ ಯಾವ ಆಕ್ಸಿಡೆಂಟ್ನಾಗ ಅಥವಾ ಏನರ ಭಾರಿ ಕಾಯಿಲೆ ಬಂದು ಇದ್ದಕ್ಕಿಂದ್ದಂಗ ಸಾಯ್ತಿàವೋ, ಏನು ಅವಘಡ ಆಗ್ತದೋ ಅನ್ನೂದೂ ನಮಗೊತ್ತಿಲ್ಲ, ಅದು ನಮ್ಮ ಕೈಯಾಗೂ ಇಲ್ಲ. ಬದುಕಿರದೇ ಒಂದು ಆಕಸ್ಮಿಕ ಅನ್ನು, ಆದ್ರ ಈ ಆಕಸ್ಮಿಕ ಮಾತ್ರ ಖರೇ ಭಾಳ ಅಗಾಧ ಅದ… ಉಸಿರು ಗಕ್ ಅಂತ ನಿಲ್ಲೂ ತನಾ ಮುಂದ ಸಾಗ್ತನೇ ಇರಬಕು. ಏನೇ ಅನ್ನು, ನಮ್ಮ ಪದ್ದಜ್ಜಿ ಅಂತೋರು ಎಷ್ಟೆಲ್ಲ ನುಂಗಿ, ಹೀಂಗ ಮುಂದೆ ಸಾಗ್ತಲೇ ಇದ್ರು ನೋಡು. ಭಾಳ ಶಕ್ತಿ ಬೇಕಾಗ್ತದಲಾ ಅದಕ್ಕ” ಪ್ರೊಫೆಸರ್ ಹೀಗೆ ಮಾತನಾಡುವಾಗೆಲ್ಲ ತಮ್ಮೊಳಗೇ ಹೇಳಿಕೊಂಡಂತೆ ನಿಧಾನವಾಗಿ ಮಾತನಾಡ್ತಾರೆ ಎನ್ನಿಸಿದ ಮಹೇಶ ಹೂಂಗುಟ್ಟಿದ. ಪ್ರೊಫೆಸರ್‌ಗೆ ತೀರಿದ ಹೆಂಡತಿ ನೆನಪಾದಳು. ಮದುವೆಯಾದ ಆರಂಭದ ದಿನಗಳು, ಅವಳ ನಾಚಿಕೆ, ಅಜ್ಞಾನ, ಪೊಸೆಸಿವ್‌ನೆಸ್ ಎಂಬಷ್ಟರಮಟ್ಟಿಗಿದ್ದ ಅವಳ ಪ್ರೀತಿ, ಚೊಚ್ಚಿಲ ಬಸಿರ ಸಂಭ್ರಮ, ಮಗ ಹುಟ್ಟಿದ್ದು ಎಲ್ಲ ನೆನಪಾಯಿತು. ಈಗ ಅಂಥ ಘಳಿಗೆ ನೆನಪಾದಾಗೆಲ್ಲ ತಟ್ಟನೆ ಪದ್ದಜ್ಜಿ ನೆನಪಾಗುತ್ತಾಳೆ. ಇವಳು ಬಸುರಿಯಾಗಿ¨ªಾಗ ಎಷ್ಟು ಕಾಳಜಿಯಿಂದ ನೋಡಿಕೊಂಡಿದ್ದಳಲ್ಲ. ಇವಳ ವಾಂತಿ, ತಲೆಸುತ್ತುವಿಕೆ ಎಲ್ಲದಕ್ಕೆ ಎಂಥ ತಾಳ್ಮೆಯ, ವಾತ್ಸಲ್ಯದ ಆರೈಕೆ ಮಾಡುತ್ತಿದ್ದಳಲ್ಲ… ತನಗೆ ಬದುಕು ವಂಚಿಸಿತು ಎಂಬ ಭಾವನೆ ಎಲ್ಲೂ ತೋರ್ಪಡಿಸದಂತೆ, ಬದುಕಿಗೆ ವಿಮುಖರಾಗದೇ, ತಾನೆಂದೂ ಅನುಭವಿಸದ ಸುಖವನ್ನು ಬೇರೆಯವರೆಲ್ಲರೂ ಬದುಕಿನ ಬಟ್ಟಲಿನಿಂದ ಮೊಗೆದುಕೊಳ್ಳುವುದನ್ನು ನೋಡುತ್ತಲೇ, ತಮಗೆಲ್ಲ ಹಾಗೆ ಮೊಗೆದುಕೊಳ್ಳಲು ಸಹಾಯ ಮಾಡುತ್ತಲೇ ಇದ್ದ ಪದ್ದಜ್ಜಿ… ಯಾಕೋ ಈಗ ತೀವ್ರವಾಗಿ ಅನ್ನಿಸುತ್ತೆ… ಪದ್ದಜ್ಜಿ ಹಾಗೆ ಸುಮ್ಮನಿರಬಾರದಿತ್ತು… ಸಿಡಿದುಬಿಡಬೇಕಿತ್ತು ಎಂದು. ಹಾಗೆ ಸಿಡಿದಿದ್ದರೆ ತಾವೆಲ್ಲ ಎಷ್ಟರಮಟ್ಟಿಗೆ ಮಾನವೀಯ ಸಹೃದಯತೆಯಿಂದ ಕಾಣುತ್ತಿದ್ದೆವು ಎನ್ನುವುದು ಅವರಿಗೀಗಲೂ ಗ್ರಹಿಕೆಗೆ ಸಿಗುವುದಿಲ್ಲ. ಇಬ್ಬರೂ ಮಾತಿಲ್ಲದೇ ಕುಳಿತಿದ್ದರು. ಮತ್ತೆ ಸ್ವಲ್ಪ ಹೊತ್ತಿನ ನಂತರ ಕೆಳಗಿಳಿದು ಬಂದು ಒಳಗೆ ಮಲಗಿದರು. ಸುಮಂಗಲಾ