Advertisement

ಅಂದು ಸೈನಿಕನಾಗಿ ದೇಶ ಕಾದವರು ಇಂದು ಎಳೆಯರ ಬದುಕು ಕಟ್ಟುತ್ತಿದ್ದಾರೆ

11:18 AM Sep 06, 2019 | Team Udayavani |

ಉಡುಪಿ: ಈ ನಿವೃತ್ತ ಸೈನಿಕ ಈಗ ಶಿಕ್ಷಕ. ಶಿಕ್ಷಕನಾಗಿ ಕೆಲಸ ಮಾಡುವ ಕೋಣಿಹರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅವರು ವಾಸಿಸುವ ಉಡುಪಿಯಿಂದ ಸುಮಾರು 50 ಕಿ.ಮೀ. ದೂರವಿದೆ. ಬಿದ್ಕಲ್‌ಕಟ್ಟೆಯಿಂದ ಸುಮಾರು ಎಂಟು ಕಿ.ಮೀ. ದೂರದ ಕೋಣಿಹರಕ್ಕೆ ಬಸ್‌ ಇಲ್ಲ. ಕಾಡು ದಾರಿ. ಆದರೆ ಶಾಲೆಗೆ ಇವರು ಬೆಳಗ್ಗೆ 9ಕ್ಕೆ ಹಾಜರು. ತಾನು ಮಾತ್ರವಲ್ಲ ಮುಖ್ಯ ಶಿಕ್ಷಕಿಯನ್ನೂ ಅದೇ ಸಮಯಕ್ಕೆ ಹಾಜರಾಗುವಂತೆ ನೋಡಿಕೊಳ್ಳುತ್ತಾರೆ.
ಇದು ನಿವೃತ್ತ ಸೈನಿಕ ಯಶವಂತ ಅವರ ದೈನಂದಿನ ಕಥೆ. ಇದು ಯಶೋ
ಗಾಥೆ, ಪರಿಶ್ರಮಗಾಥೆಯೂ ಹೌದು.

Advertisement

ಇವರು 13 ವರ್ಷಗಳಿಂದ ಅಲ್ಲಿ ಶಿಕ್ಷಕರು. ಮೊದಲು 6 ತಿಂಗಳು ಬೈಕ್‌ನಲ್ಲಿಯೇ ಸಂಚರಿಸಿದ ಯಶವಂತರಿಗೆ ಬೆನ್ನು ನೋವು ಆರಂಭವಾದಾಗ ಬಸ್‌ನಲ್ಲಿ ಸಂಚರಿಸಲು ಆರಂಭಿಸಿದರು. ಬೆಳಗ್ಗೆ 7.30ಕ್ಕೆ ಮನೆಬಿಟ್ಟು ಬಸ್‌ನಲ್ಲಿ ಕಲ್ಯಾಣಪುರ ಸಂತೆಕಟ್ಟೆಗೆ ಬರುತ್ತಾರೆ. ಅಲ್ಲಿಂದ ಬಿದ್ಕಲ್‌ಕಟ್ಟೆಗೆ ಮತ್ತೂಂದು ಬಸ್‌. ಅಲ್ಲಿ ಒಂದು ಮನೆಯಲ್ಲಿ ಬೈಕ್‌ ಇರಿಸಿರುತ್ತಾರೆ. ಮುಖ್ಯ ಶಿಕ್ಷಕಿ ಶಕುಂತಳಾ ನೀಲಾವರದಿಂದ ಬಿದ್ಕಲ್‌ಕಟ್ಟೆಗೆ ಬಂದಿರುತ್ತಾರೆ. ಅಲ್ಲಿಂದ ಇಬ್ಬರೂ ಜತೆಯಾಗಿ ಹೋಗಿ 9 ಗಂಟೆಯೊಳಗೆ ಶಾಲೆಗೆ ಹಾಜರು.

1ರಿಂದ 5ನೇ ತರಗತಿ ವರೆಗಿನ ಬಡ ಕುಟುಂಬಗಳ 21 ಮಕ್ಕಳಿರುವ ಶಾಲೆ ಅದು. ಇಬ್ಬರೇ ಶಿಕ್ಷಕರು. ಶಾಲೆ ಶುಚಿಗೊಳಿಸುವುದು, ನೀರಿನ ಪೈಪ್‌ ತುಂಡಾದರೆ, ಮಕ್ಕಳಿಗೆ ಹುಷಾರಿಲ್ಲದಿದ್ದರೆ ಎಲ್ಲವನ್ನೂ ಯಶವಂತರು ನಿರ್ವಹಿಸುತ್ತಾರೆ. ಮಧ್ಯಾಹ್ನದೂಟಕ್ಕೆ ತರಕಾರಿ ತೋಟವಿದೆ. ಮೂರ್‍ನಾಲ್ಕು ವರ್ಷಗಳ ಹಿಂದೆ ಶಾಲೆ ದುಃಸ್ಥಿತಿಯಲ್ಲಿದ್ದಾಗ ಕುಂದಾಪುರ ಬಿಇಒ ಅಶೋಕ್‌ ಕಾಮತ್‌ ಅನುದಾನ ಒದಗಿಸಿದರು. ದುರಸ್ತಿ ಸಂದರ್ಭ ಮಕ್ಕಳನ್ನು ಮರದ ಬುಡದಲ್ಲಿ ಕುಳ್ಳಿರಿಸಿ ನೈಸರ್ಗಿಕವಾಗಿ ಪಾಠ ಮಾಡಿದರು ಇವರಿಬ್ಬರು.

ಬಡ ಮಕ್ಕಳಾದರೂ ಇಲ್ಲಿ ಓದಿ ಮುಂದೆ ಎಸೆಸೆಲ್ಸಿಯಲ್ಲಿ  ಶೇ. 90ಕ್ಕಿಂತ ಹೆಚ್ಚು ಅಂಕ ಪಡೆ ದವರಿದ್ದಾರೆ.

ಸೇನೆಯವರಿಗೆ ನಿತ್ಯವೂ ಸ್ಮರಣೀಯವೇ
ಯಶವಂತ್‌ 17 ವರ್ಷ ಸೇನೆಯಲ್ಲಿದ್ದರು. ಪಿಯುಸಿ ಮುಗಿಸಿ ಟಿಸಿಎಚ್‌ ಕಲಿತು ಫ‌ಲಿತಾಂಶ ಬರುವುದರೊಳಗೆ ಸೇನೆಗೆ ಆಯ್ಕೆಯಾಗಿ 1988ರಿಂದ 2005ರ ವರೆಗೆ ಕೆಲಸ ಮಾಡಿದರು. ನಿವೃತ್ತಿಯ ಬಳಿಕ ಶಿಕ್ಷಕರಾಗಿ ಆಯ್ಕೆಯಾಗಲು ಮತ್ತೆ ಕಲಿಯುವ ಪರಿಶ್ರಮ ಬೇಕಿರಲಿಲ್ಲ. ಸೇನಾವಧಿಯಲ್ಲಿ ಸ್ಮರಣೀಯ ಘಟನೆಗಳೇನು ಎಂದು ಪ್ರಶ್ನಿಸಿದರೆ “ಸೇನೆಯಲ್ಲಿ ನಿತ್ಯವೂ ಸ್ಮರಣೀಯವೇ’ ಎನ್ನುತ್ತಾರೆ.

Advertisement

ಹುದ್ದೆ ಕೈತಪ್ಪುವುದೂ ಸರಳ !
ಯಶವಂತ್‌ ಮತ್ತು ಶಕುಂತಳಾ ಇಬ್ಬರೂ ಒಟ್ಟಿಗೆ ಶಿಕ್ಷಕ ಪರೀಕ್ಷೆ ಬರೆದಿದ್ದರು. ಒಟ್ಟಿಗೆ ನೇಮಕಾತಿ ಆದೇಶ ಪಡೆದರು. ಕೆಲಸಕ್ಕೆ ಸೇರ್ಪಡೆಯಾಗುವಷ್ಟರಲ್ಲಿ ಯಶವಂತರು ಸೇನಾ ಇಲಾಖೆಯ ಕೆಲವು ಪ್ರಕ್ರಿಯೆಗಾಗಿ ಹೋದರು. ಶಕುಂತಳಾ ಮೊದಲು ಕೆಲಸಕ್ಕೆ ಸೇರಿದರು. ಯಶವಂತ್‌ 10 ದಿನ ತಡವಾಯಿತು. ಹೀಗಾಗಿ ಶಕುಂತಳಾ ಮುಖ್ಯ ಶಿಕ್ಷಕಿ, ಯಶವಂತ್‌ ಸಹಶಿಕ್ಷಕ.

“ಇಂಥ ಶಿಕ್ಷಕರನ್ನು ನೋಡಿಲ್ಲ’
ಕೋಣಿಹರ ಶಾಲೆ ಮುಚ್ಚಿಹೋಗುವುದರಲ್ಲಿತ್ತು. ಯಶವಂತ್‌ ಮತ್ತು ಶಕುಂತಳಾರಂತಹ ಪ್ರಾಮಾಣಿಕ ಶಿಕ್ಷಕರನ್ನು ನೋಡಿಲ್ಲ. 24 ಗಂಟೆಯೂ ಅವರಿಗೆ ಶಾಲೆಯ ಕನಸು ಇರುತ್ತದೆ.
– ಚಂದ್ರಶೇಖರ ಶೆಟ್ಟಿ, ಉದ್ಯಮಿ, ಮೊಳಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next